ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾದಂಬರಿ ಸಾಹಿತ್ಯಕ್ಕೆ ವಿಶಿಷ್ಟ ರೂಪ ಮತ್ತು ನಿರೂಪಣಾ ಕ್ರಮವನ್ನು ವಿಸ್ತರಿಸಿದ ಚಿಂತಕ, ಶ್ರೇಷ್ಠ ಕಾದಂಬರಿಕಾರ ಎಸ್.ಎಲ್.ಭೈರಪ್ಪ ನಮ್ಮನ್ನಗಲಿದ್ದರೂ ಅವರು ತಮ್ಮ ಕಾದಂಬರಿಗಳ ಮೂಲಕ ಜನಮಾನಸದಲ್ಲಿ ಜೀವಂತವಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ನಗರದ ಜ್ಯೂನಿಯರ್ ಕಾಲೇಜು ಆವರಣದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಕಸಾಪ ವತಿಯಿಂದ ಏರ್ಪಡಿಸಿದ್ದ ದಿವಂಗತ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಶ್ರದ್ಧಾಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅನ್ನ ಸಿಗದಿದ್ದರೂ ಅಕ್ಷರ ಬಿಡಲಿಲ್ಲಎಸ್.ಎಲ್.ಭೈರಪ್ಪ ಅವರು ಕಡುಬಡತನದಲ್ಲಿ ಹುಟ್ಟಿ ಬೆಳೆದು ಬಾಲ್ಯದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಸಂಕಷ್ಟಗಳಲ್ಲಿ ಕಳೆದು ಹೋಗದೆ, ಅನ್ನಕ್ಕಾಗಿ ಅಕ್ಷರಗಳಿಂದ ದೂರವಾಗದೆ, ಸಾಹಿತ್ಯಲೋಕದ ಮಾಂತ್ರಿಕ ನೆನೆಸಿದರು. ತತ್ವಶಾಸ್ತ್ರದ ಉಪನ್ಯಾಸಕ ವೃತ್ತಿಯಿಂದ ಆರಂಭವಾಗಿ ದೆಹಲಿಯ ಎನ್‌ಸಿಇಆರ್‌ಟಿಯ ಪ್ರಾಧ್ಯಾಪಕ ಹಾಗೂ ಸಂಶೋಧಕರಾಗಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಜನಜೀವನದ ಬಗ್ಗೆ ಅಪಾರ ಚಿಂತನೆಯನ್ನು ರೂಪಿಸಿ ತಮ್ಮ ಕೃತಿಗಳ ಮೂಲಕ ಸಾರಸ್ವತ ಲೋಕಕ್ಕೆ ನೀಡಿರುತ್ತಾರೆ ಎಂದರು.
ಬೋಧಕರಾಗಿ, ಸಂಶೋಧಕರಾಗಿ, ಲೇಖಕರಾಗಿ ಕರ್ತವ್ಯ ನಿರ್ವಹಿಸಿ ಜೊತೆ ಜೊತೆಗೆ ಕಾದಂಬರಿ ಕೃಷಿಯಲ್ಲಿ ತೊಡಗಿದವರು. ಗ್ರಾಮೀಣ ಸಂಸ್ಕೃತಿಯಲ್ಲಿ ಹುಟ್ಟಿಬೆಳೆದ ಇವರು ತಮ್ಮ ಕಾದಂಬರಿಗಳಲ್ಲಿ ಶ್ರೀಸಾಮಾನ್ಯರ ಬಗ್ಗೆ, ಜೀವನದ ನೈತಿಕತೆಯ ಬಗ್ಗೆ, ವಿಶೇಷ ಬೆಳಕು ಚೆಲ್ಲಿದ್ದಾರೆ. ಧರ್ಮಶ್ರೀ, ವಂಶವೃಕ್ಷ, ದಾಟು, ಗೃಹಭಂಗ, ದೂರಸರಿದವರು, ಪರ್ವ, ಉತ್ತರಕಾಂಡ, ಸಾರ್ಥ, ಅಂಚು, ನಿರಾಕರಣ, ಅನ್ವೇಷಣ, ಸಾಕ್ಷಿ ಮುಂತಾದ ಕಾದಂಬರಿಗಳು, ಭಿತ್ತಿ ಎಂಬ ತಮ್ಮ ಆತ್ಮಕಥನವನ್ನು ಬರೆದಿದ್ದಾರೆ. ಇವರ ಪ್ರತಿ ಕಾದಂಬರಿಯೂ ವಿಶಿಷ್ಟ ಪಾತ್ರಗಳು, ಸಂದರ್ಭಗಳು ಮತ್ತು ಮೌಲ್ಯಗಳನ್ನು ಒಳಗೊಂಡಿವೆ ಎಂದರು.ಓದುಗರೊಂದಿಗೆ ಜೀವಂತ
ಹೀಗಾಗಿ ಭೈರಪ್ಪನವರು ಓದುಗರೊಂದಿಗೆ ಜೀವಂತವಾಗಿದ್ದಾರೆ. ಹಲವು ಕಾದಂಬರಿಗಳು ಹತ್ತಾರು ಭಾಗಳಲ್ಲಿ ಜೀವ ತಳೆದಿವೆ. ಜೀವಪರ ಕಾಳಜಿ ಹೊಂದಿದ್ದ ಸರಳ ಸಜ್ಜನಿಕೆಯ ಭೈರಪ್ಪನವರ ಕೃತಿಗಳಲ್ಲಿನ ಆಶಯ ಮತ್ತು ನೈತಿಕ ಮಾರ್ಗ ಸೂಚಿಗಳನ್ನು ಓದಿ ಪಾಲಿಸುವ ಮೂಲಕ ಆ ಮಹಾನ್ ಲೇಖಕರಿಗೆ ನಾವು ಗೌರವ ಸಲ್ಲಿಸಬೇಕು. ತನ್ಮೂಲಕ ನಮ್ಮ ಬದುಕನ್ನು ಮೌಲಿಕವಾಗಿ ರೂಪಿಸಿಕೊಳ್ಳಬೇಕು ಎಂದು ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಬೈರಪ್ಪನವರಿಗೆ ಗೌರವ ಅರ್ಪಿಸಿ ಮಾತನಾಡಿ, ಭೈರಪ್ಪನವರು ಜೀವನದ ಕಷ್ಟಗಳ ಸಂದರ್ಭಗಳನ್ನು ಎದುರಿಸಿರುವ ರೀತಿಯನ್ನು ಸ್ಮರಿಸಿ ಬದುಕನ್ನು ಸವಾಲಾಗಿ ಸ್ವೀಕರಿಸಿ ಬೆಳೆದವರು. ಆ ಕೃತಿಗಳನ್ನು ಓದುವ ಶ್ರೀ ಸಾಮಾನ್ಯರಲ್ಲಿಯೂ ಕೂಡ ಅವರ ಕೃತಿಗಳು ಬಡತನವನ್ನು ಮೆಟ್ಟಿನಿಲ್ಲುವ ಆತ್ಮವಿಶ್ವಾಸ ಬೆಳೆಸುತ್ತವೆ. ಭೈರಪ್ಪನವರ ಆತ್ಮಕಥನ ಭಿತ್ತಿಯನ್ನು ಓದುವ ಮೂಲಕ ಅವರ ಸಾಧನೆಯನ್ನು ಅರ್ಥಮಾಡಿಕೊಂಡು ಸಾಧನೆಗೆ ಪ್ರೇರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶ್ರದ್ಧಾಂಜಲಿ ಅರ್ಪಣೆ:
ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರಾದ ಕೆ.ಎಂ.ರೆಡ್ಡಪ್ಪ. ಎಸ್.ಎನ್. ಅಮೃತ್ ಕುಮಾರ್, ಡಿ.ಎಂ. ಶ್ರೀ ರಾಮ್, ಮಂಜುನಾಥ್, ಲೇಖಕಿ ಸರಸಮ್ಮ, ನಗರಸಭಾ ಸದಸ್ಯ ಅಣ್ಣಮ್ಮ, ಕನ್ನಡ ಸೇನೆಯ ವಿ.ರವಿಕುಮಾರ್, ಬದರಿನಾಥ್ ಮೊದಲಾದವರು ಭೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.