ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ 2 ಕೋಟಿ ರು. ಅನುದಾನ ಇನ್ನೂ ಬಿಡುಗಡೆಯಾಗದ್ದರಿಂದ ನಾಲ್ಕು ತಿಂಗಳಿನಿಂದ ವಿವಿಯ ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆ ಆಗಿಲ್ಲ. ಇದರಿಂದ ವಿವಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ
ಹಾವೇರಿ:ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ 2 ಕೋಟಿ ರು. ಅನುದಾನ ಇನ್ನೂ ಬಿಡುಗಡೆಯಾಗದ್ದರಿಂದ ನಾಲ್ಕು ತಿಂಗಳಿನಿಂದ ವಿವಿಯ ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆ ಆಗಿಲ್ಲ. ಇದರಿಂದ ವಿವಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪ್ರಸಕ್ತ ವರ್ಷ ಪ್ರವೇಶಾತಿ ಕೂಡ ಗಣನೀಯವಾಗಿ ಕುಸಿದಿದೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ವಿವಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಕೇಂದ್ರದಿಂದ 1.27 ಕೋಟಿ ರು. ಬಿಡುಗಡೆ ಆಗಬೇಕಿದೆ. ಅಂಬೇಡ್ಕರ್ ಭವನಕ್ಕೆ 2 ಕೋಟಿ ರು. ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ವಿವಿಯ ಕೆಲ ಅಧಿಕಾರಿಗಳು 45 ಲಕ್ಷ ರು. ಮುಂಗಡ ಪಡೆದ ಕುರಿತು ಈಗಾಗಲೇ ಒಂದು ಬಾರಿ ನೋಟಿಸ್ ನೀಡಿದ್ದೇನೆ. ವಿವಿ ಅಭಿವೃದ್ಧಿಗಾಗಿ 500 ಕೋಟಿ ರು. ಕ್ರಿಯಾಯೋಜನೆ ಸಿದ್ಧಪಡಿಸುವುದು, ವಸತಿ ನಿಲಯ ನಿರ್ಮಾಣ, ಆರ್ಥಿಕ ಪ್ರಗತಿ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ನಡಾವಳಿ ಮಾಡಲಾಗಿದೆ ಎಂದು ತಿಳಿಸಿದರು.ಆಡಳಿತ ಕುಲಸಚಿವ ಸಿ.ಟಿ. ಗುರುಪ್ರಸಾದ ಮಾತೃ ಸಂಸ್ಥೆಗೆ ವರ್ಗಾವಣೆಯಾದ ಬಳಿಕ ಅವರ ಹುದ್ದೆಗೆ ಪ್ರಭಾರಿಯಾಗಿ ಮೌಲ್ಯಮಾಪನ ಕುಲಸಚಿವ ಕೆ.ಶಿವಶಂಕರ ಅವರನ್ನು ನೇಮಿಸಲಾಗಿತ್ತು. ಈಗ ಅವರು ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಾರದ ಒಳಗೆ ಸರ್ಕಾರದಿಂದ ನೇಮಕ ಆಗುವ ಸಾಧ್ಯತೆ ಇದೆ ಎಂದು ಕುಲಪತಿ ಹೇಳಿದರು.ನ. 24ರಂದು ಜಾನಪದ ವಿಶ್ವವಿದ್ಯಾಲಯಕ್ಕೆ ಎಸ್.ನಾಗರಾಜ, ಶಿವಸೋಮಪ್ಪ ನಿಟ್ಟೂರ, ಬಸವರಾಜ ದುಗ್ಗಾಣಿ ಮತ್ತು ಬಸವರಾಜ ಗೊಬ್ಬಿ ಅನಧಿಕೃತವಾಗಿ ಪ್ರವೇಶಿಸಿ, ಗದ್ದಲ ಮಾಡಿದ್ದಾರೆ. ನಮ್ಮ ವಿವಿ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮ್ಮ ವಿವಿಗೆ ಸೂಕ್ತ ರಕ್ಷಣೆ ನೀಡಿ ಎಂದು ಸ್ವತಃ ತಾವೇ ಶಿಗ್ಗಾಂವಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾಗಿ ವಿಸಿ ಡಾ.ಟಿ.ಎಂ. ಭಾಸ್ಕರ ತಿಳಿಸಿದರು.ಯಾವುದೇ ಅಕ್ರಮ ನಡೆದಿಲ್ಲ:ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2023ರಲ್ಲಿ ನಡೆದ ಕಾಯಂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಯಾವುದೇ ಅಕ್ರಮ ನಡೆದಿಲ್ಲ. ವಿಶ್ವವಿದ್ಯಾಲಯದ ನೇಮಕಾತಿ ಕುರಿತ ಆರೋಪಗಳು ಸತ್ಯಕ್ಕೆ ದೂರವಾದದ್ದು. ಆರೋಪ ಮಾಡುವವರು ತಮ್ಮ ಬಳಿ ದಾಖಲೆ ಇದ್ದರೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಿ. ತಪ್ಪು ಕಂಡರೆ ಖಂಡಿತವಾಗಿ ಕ್ರಮ ಜರುಗಿಸಲಾಗುವುದು. ಮುಂದಿನ ಸಭೆಯಲ್ಲಿ ಸಿಂಡಿಕೇಟ್ ಸದಸ್ಯರು ದಾಖಲೆ ನೀಡಿದರೆ ಸಂಬಂಧಪಟ್ಟವರಿಂದ ಮಾಹಿತಿ ಕೇಳಲಾಗುವುದು ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಹೇಳಿದರು.ಅಂಕಪಟ್ಟಿ ನೈಜತೆ ಆರೋಪ ಸತ್ಯಕ್ಕೆ ದೂರ: 2015ರಲ್ಲಿ ಜಾನಪದ ವಿವಿಗೆ ಸಹಾಯಕ ಕುಲಸಚಿವನಾಗಿ ಸರ್ಕಾರದಿಂದ ನಿಯೋಜನೆಗೊಂಡಿದ್ದು, 2023ರಲ್ಲಿ ಸಹಾಯಕ ಕುಲಸಚಿವನಾಗಿ ಕಾಯಂ ನೇಮಕಗೊಂಡಿದ್ದೇನೆ. ನನ್ನ ಪದವಿ ಅಂಕಪಟ್ಟಿ ನೈಜತೆ ಬಗ್ಗೆ ಸರ್ಕಾರ ತನಿಖೆ ನಡೆಸಿ, ಎಲ್ಲವೂ ಸರಿ ಇದೆ ಎಂದು ಹೇಳಿದೆ. ಹೀಗಿದ್ದರೂ ಎಸ್.ನಾಗರಾಜ, ಶಿವಸೋಮಪ್ಪ ನಿಟ್ಟೂರ, ಬಸವರಾಜ ದುಗ್ಗಾಣಿ ಮತ್ತು ಬಸವರಾಜ ಗೊಬ್ಬಿ ಇವರು ನನ್ನ ಅಂಕಪಟ್ಟಿ ಹಾಗೂ ಪದವಿಯ ನೈಜತೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಹಾಳು ಮಾಡಲು ಷಡ್ಯಂತ್ರ ನಡೆಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದೇನೆಂದು ಹಬ್ಬಿಸಿದ್ದಾರೆ. ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಹಣಕ್ಕೂ ಬೇಡಿಕೆ ಇಟ್ಟಿದ್ದರು. ನನ್ನ ಮದುವೆ ಸಂದರ್ಭದಲ್ಲಿ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಲು ಮುಂದಾಗಿದ್ದರು. ಅವರ ಆರೋಪಗಳು ಸುಳ್ಳು. ನನ್ನ ವಿದ್ಯಾರ್ಹತೆ, ಪದವಿ ಬಗ್ಗೆ ಅನುಮಾನ ಇದ್ದರೆ ಯಾವುದೇ ತನಿಖೆಗೂ ಸಿದ್ಧನಿದ್ದೇನೆ. ವೈಯಕ್ತಿಕ ಹಗೆತನಕ್ಕಿಳಿದಿರುವ ಪಟ್ಟಭದ್ರ ಹಿತಾಸಕ್ತಿಗಳು, ತೇಜೋವಧೆ ಮಾಡುವುದನ್ನು ಮುಂದುವರಿಸಿದ್ದಾರೆ. ಅವರು ಮಾಡುವ ಎಲ್ಲ ಆರೋಪಗಳಿಗೆ ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಜಾನಪದ ವಿವಿ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಹೇಳಿದರು.