ಸಾರಾಂಶ
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸಕ್ಕೆ ಆಗಮಿಸುವ ಭಕ್ತರಿಗೆ ಸಾಮಾಜಿಕ ಧುರೀಣ ಸಂತೋಷ ರಾಯ್ಕರ ಅನ್ನಸಂತರ್ಪಣೆ ಏರ್ಪಡಿಸಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.೨ ವರ್ಷಕ್ಕೊಂದು ಬಾರಿ 9 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದ ೭ ದಿನಗಳ ಕಾಲ ನಿತ್ಯ ಜಾತ್ರೆಗೆ ಬರುವ ಸಾವಿರಾರು ಜನರಿಗೆ ಅನ್ನ ದಾಸೋಹ ಮಾಡುತ್ತಾರೆ. ಅನ್ನ, ಸಾರು, ಪಲ್ಯ, ಪಾಯಸ, ಉಪ್ಪಿನಕಾಯಿ, ಹಪ್ಪಳ ಸೇರಿದಂತೆ ಒಂದೊಂದು ದಿನ ಒಂದೊಂದು ಬಗೆಯ ಅಡುಗೆ ಮಾಡಿ ಭಕ್ತರಿಗೆ ಉಣಬಡಿಸಲಾಗುತ್ತದೆ. ಜಾತ್ರೆಗೆ ಬರುವ ಪ್ರತಿ ಭಕ್ತರು ಇಲ್ಲಿಗೆ ಬಂದು ಊಟ ಮಾಡಿ ಹಸಿವು ತಣಿಸಿಕೊಂಡು ಹೋಗುವುದು ಸಾಮಾನ್ಯ. ಅಲ್ಲದೇ ದೂರ ದೂರದ ಊರಿನಿಂದ ಬಂದು ಜಾತ್ರೆಯಲ್ಲಿ ಅಂಗಡಿ ಹಾಕಿಕೊಂಡ ವ್ಯಾಪಾರಸ್ಥರು ಕೂಡ ಊಟದ ಸಮಯವಾಗುತ್ತಿದ್ದಂತೆ ಊಟ ಮಾಡುತ್ತಾರೆ. ಜಾತ್ರೆ ಮುಗಿಯುವವರೆಗೂ ನಿತ್ಯ ೩ ರಿಂದ ೪ ಸಾವಿರ ಜನ ಊಟ ಮಾಡುತ್ತಾರೆ. ಹಲವು ವರ್ಷಗಳಿಂದ ಊಟದ ವ್ಯವಸ್ಥೆ ಮಾಡುತ್ತ ಬಂದಿರುವ ಸಂತೋಷ ರಾಯ್ಕರ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರ್ಷಕ್ಕೆ ಕನಿಷ್ಠ ೧ ಲಕ್ಷ ಜನರಿಗೆ ಅನ್ನದಾಸೋಹ ಮಾಡುವುದು ನಮ್ಮ ಗುರಿಯಾಗಿದೆ. ಯಾವುದೇ ಜಾತ್ರೆ ಧಾರ್ಮಿಕ ಸಮಾರಂಭಗಳಿಗೆ ಬರುವ ಭಕ್ತರು ಹಸಿವಿನಿಂದ ನರಳಬಾರದು. ಅನ್ನದಾನ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಭಗವಂತ ಆ ಅವಕಾಶವನ್ನು ನಮಗೆ ಮಾಡಿಕೊಟ್ಟಿದ್ದಾನೆ. ಮುಂದೆ ಕೂಡ ನಾವಿರಲಿ ಇಲ್ಲದೇ ಇರಲಿ ನಮ್ಮ ಕುಟುಂಭಸ್ಥರು ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಸಾಮಾಜಿಕ ಧುರೀಣ ಸಂತೋಷ ರಾಯ್ಕರ.