ಸಾರಾಂಶ
ಕುಂದಗೋಳ:
ಅನುಭವಿಗಳು, ಮಹಾತ್ಮರು ಹೇಳಿದಂತೆ ಈ ಜಗತ್ತಿನಲ್ಲಿ ಅನ್ನ, ನೀರು ಸುಭಾಷಿತವೇ ಮೂರು ರತ್ನಗಳು ಎಂದು ದುಮ್ಮವಾಡದ ಸರ್ಫಭೂಷಣ ದೇವರು ಹೇಳಿದರು.ಪಟ್ಟಣದಲ್ಲಿ ಲಿಂ. ಬಸವಣ್ಣಜ್ಜನವರ ಪುಣ್ಯ ಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಕಾರ್ಯಕ್ರಮದ ನಾಲ್ಕನೇ ದಿನದ ಅಂಗವಾಗಿ ಮಂಗಳವಾರ ಸಂಜೆ ನಡೆದ ರೈತ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದರು. ಈ ಜೀವ ಸಂಕುಲವು ನೀರಿಲ್ಲದೇ ಬದುಕಲು ಸಾಧ್ಯವಿಲ್ಲ, ಸಕಲ ಜೀವರಾಶಿಗೆ ನೀರು ಬೇಕೇಬೇಕು. ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಎಲ್ಲದಕ್ಕೂ ನೀರು ಬಹಳ ಮುಖ್ಯ. ಆದ್ದರಿಂದ ಇದು ಮೊದಲನೇ ರತ್ನ, 2ನೇ ರತ್ನವೆಂದರೆ ಅನ್ನ. ನಾವು ನಮ್ಮ ಕೈಲಾದಷ್ಟು ಹಸಿದವರಿಗೆ ಅನ್ನ ಬಡಿಸಬೇಕು, ದಾಸೋಹದಂತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಮುಂದಾಗಬೇಕು, ಮೂರನೇ ರತ್ನ ಎಂದರೆ ಸುಭಾಷಿತ. ಒಳ್ಳೆಯ ಆಚಾರ-ವಿಚಾರ, ಒಳ್ಳೆಯ ಗುಣಗಳನ್ನು ಇಟ್ಟುಕೊಂಡು ಜೀವನದ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು.
ಕಲ್ಯಾಣ ಪುರದ ಅಭಿನವ ಬಸವಣ್ಣಜ್ಜನವರು ಮಾತನಾಡಿ, ಸಂಶಿ, ಗುಡೇನಕಟ್ಟಿ, ಕಡಪಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಶ್ರೀಮಠದ ಜಾತ್ರೆಯಲ್ಲಿ ಅಪಾರ ಪ್ರಮಾಣದ ದವಸ-ಧಾನ್ಯ ದಾನವಾಗಿ ನೀಡಿದ್ದಾರೆ. ರೈತರೇ ಈ ದೇಶದ ಬೆನ್ನಲುಬು. ಇಂದು 4ಜಿ, 5ಜಿ ಬಂದಿದೆ. ಮುಂದೆ 10ಜಿ ಬಂದರೂ ಜಗತ್ತಿಗೆ ಅನ್ನ ನೀಡುವುದು ರೈತನೆ. ಹಾಗಾಗಿ ಪ್ರತಿಯೊಬ್ಬರು ರೈತರ ಉಳಿವಿಗಾಗಿ ಶ್ರಮಿಸುವಂತೆ ಕರೆ ನೀಡಿದರು.ತಾಲೂಕಿನ ಗುಂಜಳ ಗ್ರಾಮದ ಸಾವಯುವ ರೈತ ಮಲ್ಲೇಶಣ್ಣ ಬಿಸೋರೊಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮಹಾಂತ ದೇವರು, ಶಿವಾನಂದ ಮಠದ ಶಿವಾನಂದ ಶ್ರೀ, ಸಂಶಿ ವಿರಕ್ತಮಠದ ಚನ್ನಬಸವ ದೇವರು, ರಾಚೋಟೇಶ್ವರ ಶ್ರೀ, ಶಿವಮೊಗ್ಗದ ಶಿವಬಸವ ದೇವರು, ಕಲಬುರಗಿಯ ಸಿದ್ದರಾಮ ದೇವರು, ಶಶಿಕುಮಾರ ದೇವರು, ಶಂಕರಲಿಂಗ ದೇವರು, ಮುಖಂಡರಾದ ಗೌಡಪ್ಪಗೌಡ ಪಾಟೀಲ, ಗಿರಿಜಮ್ಮ ಪಾಟೀಲ, ಎನ್.ಎನ್. ಪಾಟೀಲ, ಎ.ಬಿ. ಉಪ್ಪಿನ, ಲಕ್ಷ್ಮಣ ಚುಳಕಿ, ಪರಮೇಶಪ್ಪ ನಾಯ್ಕರ, ಬಸಣ್ಣ ಸೈಬಣ್ಣವರ, ಸಿದ್ದಣ್ಣ ಕೌಜಗೇರಿ ಸೇರಿದಂತೆ ಹಲವರಿದ್ದರು.