ಸಾರಾಂಶ
ಬಳ್ಳಾರಿ: ಜಿಲ್ಲೆಯ ಅನೇಕ ಪ್ರತಿಭಾನ್ವಿತರು ತಮ್ಮ ಸಾಧನೆಗಳ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಮುಖ್ಯಸ್ಥ, ಚಿಂತಕ ಸಿ. ಚನ್ನಬಸವಣ್ಣ ತಿಳಿಸಿದರು.
ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆಯಡಿ ನಗರ ಹೊರ ವಲಯದ ಸಂಗನಕಲ್ಲು ಗ್ರಾಮದ ಕೃಷ್ಣ ಸನ್ನಿಧಿಯಲ್ಲಿ ಆಯೋಜಿಸಿದ್ದ ನಾದ ನಿನಾದ (ಸಂಗೀತ ಸಂಭ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಜನರು ಈ ಜಿಲ್ಲೆಯವರಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ಗಾಯಕ ದೊಡ್ಡ ಬಸವ ಗವಾಯಿ ಸೇರಿದಂತೆ ಹಲವರು ತಮ್ಮ ಪ್ರತಿಭೆಯಿಂದ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದರು.
ಭಾರತದ ವೈಶಿಷ್ಟ್ಯತೆ ಎಂದರೆ ಭಿನ್ನತೆಯಲ್ಲಿ ಏಕತೆ ಹೊಂದಿದೆ. ದೇಶವಾಗಿದ್ದರೂ ಹಲವು ರಾಜ್ಯಗಳ ಒಕ್ಕೂಟವಾಗಿದೆ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ, ಆಚರಣೆಗಳಿದ್ದರೂ ಭಿನ್ನತೆಯಲ್ಲಿ ಏಕತೆಯಿಂದ ವಿಶ್ವದ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.ನಿಸರ್ಗದ ಮಡಿಲಲ್ಲಿ ಇರುವ ಕೃಷ್ಣ ಸನ್ನಿಧಿ ಹಿರಿಯರ ನೆಮ್ಮದಿ ತಾಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ಕಾರ್ಯಕ್ರಮಗಳಲ್ಲಿ ಮಾತು ಸೂತಕ. ಹೀಗಾಗಿ ಸಂಗೀತ ಅಸ್ವಾದಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಸನ್ನಿಧಿಯ ನಿರ್ದೇಶಕಿ ಡಾ. ನಾಗರತ್ನ ಸುಯಜ್ಞ ಅವರು ಮಾತನಾಡಿ, ಕೃಷ್ಣ ಸನ್ನಿಧಿ ಹಿರಿಯರ ಅನಾಥಾಶ್ರಮವಲ್ಲ. ತಮ್ಮ ಸ್ವ ಇಚ್ಚೆಗನುಸಾರವಾಗಿ ಶಾಂತಿಯುತವಾಗಿ ಬದುಕಲು ಪ್ರಯತ್ನಿಸುವ ಮುಸ್ಸಂಜೆಯ ತಂಗುದಾಣ ಎಂದು ಹೇಳಿದರು.
ಹಿರಿಯರ ದೈಹಿಕ, ಸಾಮಾಜಿಕ, ಮಾನಸಿಕ ಅನಿವಾರ್ಯಗಳಿಗೆ ಸ್ಪಂದಿಸಿರುವುದರಿಂದ ರಾಜ್ಯ ಸರಕಾರ ಕೃಷ್ಣ ಸನ್ನಿಧಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.ಮುಖ್ಯಅತಿಥಿಯಾಗಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ. ಮಂಜುನಾಥ್ ಮಾತನಾಡಿ, ಉರಿ ಬಿಸಿಲಿನ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಕೂಡಿದ ನಿಸರ್ಗ ಧಾಮದಲ್ಲಿ ಕೃಷ್ಣ ಸನ್ನಿಧಿ ನಿರ್ಮಿಸಿ ಹಿರಿಯರಿಗೆ, ಅನಾರೋಗ್ಯ ಪೀಡಿತರಿಗೆ ಆಶ್ರಯ ನೀಡಿರುವ ಡಾ. ನಾಗರತ್ನ ಸುಯಜ್ಞ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಕುಟುಂಬ ಸದಸ್ಯರ ಸಹಕಾರ, ಬೆಂಬಲದಿಂದ ಮಾತ್ರ ಇಂತಹ ವಿಶೇಷತೆಯನ್ನು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಬಿಮ್ಸ್ ವೈದ್ಯ ಡಾ. ಸುರೇಶ್ ಚಾಗನೂರು, ರತಿ ಕಪಾಡಿಯಾ, ಡಾ. ಸುಯಜ್ಞ ಜೋಷಿ ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ಸಂಭ್ರಮಯುವ ಗಾಯಕಿ ಸೃಷ್ಟಿ ಸುರೇಶ್ ಅವರಿಂದ ಭಾವ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವರಾಮಣ್ಣ ಅವರಿಂದ ತತ್ವ ಪದ, ದೊಡ್ಡಬಸವ ಗವಾಯಿ ಅವರಿಂದ ಸುಗಮ ಸಂಗೀತ ಗಾಯನ, ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಅವರಿಂದ ವಚನ ಸಂಗೀತ, ಕುಡುತಿನಿ ಉಮೇಶ್ ಎಂ. ಅವರಿಂದ ದಾಸರ ಪದಗಳ ಗಾಯನ ಹಾಗೂ ಯೋಗೇಶ ಬಣಕಾರ ಅವರ ತಬಲಾ ಝಲಕ್ ನೆರೆದಿದ್ದ ನೂರಾರು ಸಂಗೀತ ಪ್ರಿಯರಿಗೆ ರಸದೌತಣ ನೀಡಿತು.
ಸಿ.ಚನ್ನಬಸವಣ್ಣ, ಡಾ.ನಾಗರತ್ನ ಸುಯಜ್ಞ ಅವರನ್ನು ಫೌಂಡೇಶನ್‌ನಿಂದ ಗೌರವಸಲಾಯಿತು. ಕೃಷ್ಣ ಸನ್ನಿಧಿಯಿಂದ ಗಾಯಕರನ್ನು ಸನ್ಮಾನಿಸಲಾಯಿತು.ಫೌಂಡೇಶನ್ ಅಧ್ಯಕ್ಷ ಡಾ. ಅಶ್ವ ರಾಮು ಸ್ವಾಗತಿಸಿದರು. ವಿದ್ಯಾರ್ಥಿನಿ ನಾಗವೇಣಿ ನಿರೂಪಿಸಿದರು. ಚೇತನಕುಮಾರ್ ನಿರ್ವಹಿಸಿದರು. ಆಲ್ತಾಫ್ ಬಾಷಾ ವಂದಿಸಿದರು.