ಸತತ 6ನೇ ಬಾರಿ ‘ಅಭಿಮನ್ಯು’ ಆನೆ ಮೇಲೆ ಅಂಬಾರಿ..!

| Published : Oct 01 2025, 01:00 AM IST

ಸಾರಾಂಶ

ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸತತ 6ನೇ ಬಾರಿಗೆ ಹೊರಲು ಕ್ಯಾಪ್ಟನ್ ಅಭಿಮನ್ಯು ಆನೆಯು ಸರ್ವರೀತಿಯಲ್ಲೂ ಸಜ್ಜಾಗಿದೆ. ಕಳೆದ ಒಂದೂವರೆ ತಿಂಗಳಿಂದ ತಾಲೀಮು ನಡೆಸಿರುವ ಅಭಿಮನ್ಯು ನೇತೃತ್ವದ ಗಜಪಡೆಯು 2025ನೇ ಜಂಬೂಸವಾರಿಯಲ್ಲಿ ಸಾಗಲು ಸಿದ್ಧವಾಗಿವೆ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸತತ 6ನೇ ಬಾರಿಗೆ ಹೊರಲು ಕ್ಯಾಪ್ಟನ್ ಅಭಿಮನ್ಯು ಆನೆಯು ಸರ್ವರೀತಿಯಲ್ಲೂ ಸಜ್ಜಾಗಿದೆ. ಕಳೆದ ಒಂದೂವರೆ ತಿಂಗಳಿಂದ ತಾಲೀಮು ನಡೆಸಿರುವ ಅಭಿಮನ್ಯು ನೇತೃತ್ವದ ಗಜಪಡೆಯು 2025ನೇ ಜಂಬೂಸವಾರಿಯಲ್ಲಿ ಸಾಗಲು ಸಿದ್ಧವಾಗಿವೆ.

ಕೊರೋನಾ ಹಿನ್ನೆಲೆಯಲ್ಲಿ 2020 ಮತ್ತು 2021ನೇ ಸಾಲಿನ ದಸರಾ ಜಂಬೂಸವಾರಿಯು ಮೈಸೂರು ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಇದರಿಂದಾಗಿ ಅಭಿಮನ್ಯು ಆನೆಯು ಅಂಬಾರಿಯನ್ನು ಹೊರುವುದು ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. 2022, 2023, 2024ನೇ ಸಾಲಿನಲ್ಲಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ದೂರವನ್ನು ರಾಜಮಾರ್ಗದಲ್ಲಿ ಯಶಸ್ವಿಯಾಗಿ ಅಂಬಾರಿ ಹೊತ್ತು ಅಭಿಮನ್ಯು ಸೈ ಎನಿಸಿಕೊಂಡಿದ್ದು, ಈಗ ಮತ್ತೊಮ್ಮೆ ಅಂಬಾರಿ ಹೊರಲಿದೆ.

ಅಭಿಮನ್ಯು ಆನೆಯು ದಸರಾಗೆ ಆಗಮಿಸಿದ ಆರಂಭದಲ್ಲಿ ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಕಾರ್ಯ ನಿರ್ವಹಿಸಿ, ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಸಹ ಹೊಂದಿದೆ.

ಅಭಿಮನ್ಯು ಆನೆಯನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆಗಳನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯ ಹೊಂದಿದೆ. ಈ ಆನೆಯು ಸುಮಾರು 26 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದು, 2015 ರವರೆಗೆ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿತ್ತು.

150 ಕಾಡಾನೆಗಳನ್ನು, ಸುಮಾರು 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅಭಿಮನ್ಯು, ಕಳೆದ 5 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ 59 ವರ್ಷದ ಅಭಿಮನ್ಯು ಆನೆಯನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ಮುನ್ನಡೆಸುತ್ತಿದ್ದಾರೆ.

ಮುಂದಿನ ದಸರಾ ವೇಳೆಗೆ ಅಭಿಮನ್ಯು ಆನೆಗೆ 60 ವರ್ಷ ತುಂಬಲಿದೆ. ವಯಸ್ಸಿನ ಕಾರಣಕ್ಕಾಗಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯು ಆನೆ ನಿವೃತ್ತಿ ಹೊಂದಲಿದ್ದು, 2026ನೇ ಸಾಲಿನಲ್ಲಿ ಹೊಸ ಆನೆ ಮೇಲೆ ಅಂಬಾರಿ ಹೊರಿಸುವ ಸಾಧ್ಯತೆ ಹೆಚ್ಚಿದೆ.ದಸರಾ ಅಂಬಾರಿ ಆನೆಗಳು

ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಮೊದಲು ದ್ರೋಣ ಆನೆ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ವರ್ಷ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಗೆ ಅಂಬಾರಿ ಹೊರಿಸಲಾಯಿತು. ಒಮ್ಮೆ ವಾಪಸ್ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸತತ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಅರ್ಜುನ ಆನೆಗೆ 60 ವರ್ಷ ತುಂಬಿದ ಕಾರಣ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಆನೆ ಹೆಗಲಿದೆ ಬಂತು. ಅಭಿಮನ್ಯು ಆನೆ ಕಳೆದ 5 ವರ್ಷದಿಂದ ಅಂಬಾರಿ ಹೊತ್ತಿದ್ದು, ಈಗ ಸತತ 6ನೇ ಬಾರಿಗೆ ಅಂಬಾರಿ ಹೊರಲು ಸಿದ್ಧವಾಗಿದೆ.ದಸರಾ ಗಜಪಡೆಯಲ್ಲಿ 14 ಆನೆಗಳು

2025ನೇ ಸಾಲಿನ ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಎರಡು ತಂಡಗಳಲ್ಲಿ 14 ಆನೆಗಳನ್ನು ಆಗಮಿಸಿದ್ದು, ಎಲ್ಲಾ ರೀತಿಯ ತಾಲೀಮನ್ನು ಪೂರ್ಣಗೊಳಿಸಿ ಜಂಬೂಸವಾರಿಗೆ ಸಿದ್ಧವಾಗಿವೆ.

ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಗೋಪಿ, ಸುಗ್ರೀವ, ಶ್ರೀಕಂಠ, ಕಾವೇರಿ, ಲಕ್ಷ್ಮಿ, ರೂಪಾ ಮತ್ತು ಹೇಮಾವತಿ ಆನೆಗಳು ದಸರಾ ಗಜಪಡೆಯಲ್ಲಿವೆ.

ಇಷ್ಟು ವರ್ಷ ಕೆಲವು ಆನೆಗಳನ್ನು ಆನೆ ಬಿಡಾರದಲ್ಲಿ ಉಳಿಸಲಾಗುತ್ತಿತ್ತು. ಆದರೆ, ಈ ಬಾರಿ 14 ಆನೆಗಳು ಜಂಬೂಸವಾರಿಯಲ್ಲಿ ಸಾಗುತ್ತಿರುವುದು ವಿಶೇಷ. ಇದರಿಂದ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗುವ ಅವಕಾಶ ಪಡೆದಿವೆ.ಯಾವ ಆನೆಗೆ ಯಾವ ಜವಾಬ್ದಾರಿ?

ಅಂಬಾರಿ ಆನೆ- ಅಭಿಮನ್ಯು

ಅಂಬಾರಿ ಆನೆಗೆ ಕುಮ್ಕಿಗಳು- ಕಾವೇರಿ ಮತ್ತು ರೂಪಾ

ನಿಶಾನೆ ಆನೆ- ಧನಂಜಯ

ನೌಫತ್ ಆನೆ- ಗೋಪಿ

ಸಾಲಾನೆಗಳು- ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ.