ಮಹಿಳೆಯ ಅಪಹರಣ ಪ್ರಕರಣ : ಎಚ್‌.ಡಿ.ರೇವಣ್ಣ ಅರೆಸ್ಟ್‌

| Published : May 05 2024, 02:08 AM IST / Updated: May 05 2024, 05:29 AM IST

ಸಾರಾಂಶ

ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.

 ಬೆಂಗಳೂರು :  ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಎಚ್‌.ಡಿ.ರೇವಣ್ಣ, ವಕೀಲರ ಮೂಲಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಈ ಅರ್ಜಿ ಕುರಿತು ನ್ಯಾಯಾಲಯವು ಶುಕ್ರವಾರ ಮತ್ತು ಶನಿವಾರ ಸುದೀರ್ಘ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ಶನಿವಾರ ಸಂಜೆ 6.30ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಇದರ ಬೆನ್ನಲ್ಲೇ 10 ಮಂದಿ ಎಸ್‌ಐಟಿ ಅಧಿಕಾರಿಗಳ ತಂಡವು ಪದ್ಮನಾಭನಗರಕ್ಕೆ ತೆರಳಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಯಲ್ಲಿದ್ದ ಆರೋಪಿ ಎಚ್‌.ಡಿ.ರೇವಣ್ಣ ಅವರನ್ನು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದಿತು.

ಎಚ್‌.ಡಿ.ರೇವಣ್ಣ ಅವರನ್ನು ಕೆಲ ಕಾಲ ಸಿಐಡಿ ಕಚೇರಿಯಲ್ಲಿ ಕೂರಿಸಿದ ಎಸ್ಐಟಿ ಅಧಿಕಾರಿಗಳು, ರಾತ್ರಿ ಸುಮಾರು 9 ಗಂಟೆಗೆ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ರೇವಣ್ಣ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೌರಿಂಗ್‌ ಆಸ್ಪತ್ರೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ ಸೇರಿದಂತೆ ನಿಯಮಾನುಸಾರ ಆರೋಗ್ಯ ತಪಾಸಣೆ ಮಾಡಿಸಿ ಬಳಿಕ ಸಿಐಡಿ ಕಚೇರಿಗೆ ಕರೆತರಲಾಯಿತು.

ಇಂದು ನ್ಯಾಯಾಧೀಶರ ಎದುರು ಹಾಜರು:

ಭಾನುವಾರ ಮಧ್ಯಾಹ್ನದ ವೇಳೆಗೆ ಎಸ್ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗೆಗಾಗಿ ಆರೋಪಿಯನ್ನು ಕಸ್ಟಡಿಗೆ ಪಡೆಯಲಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರ ಮಾರ್ಗದರ್ಶನದಲ್ಲಿ ಎಸ್ಪಿ ನೇತೃತ್ವದಲ್ಲಿ ರೇವಣ್ಣ ಅವರ ವಿಚಾರಣೆ ನಡೆಯಲಿದೆ.

ತಂದೆ ಮನೆಯಲ್ಲಿ ಆಶ್ರಯ:

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪದ್ಮನಾಭನಗರದಲ್ಲಿರುವ ತಂದೆ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಯಲ್ಲೇ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಇನ್ನು ಮಹಿಳೆಯ ಅಪಹರಣ ಪ್ರಕರಣ ದಾಖಲಾದ ಬೆನ್ನಲ್ಲೇ ಎಸ್‌ಐಟಿಯ ಒಂದು ತಂಡ ಎಚ್‌.ಡಿ.ರೇವಣ್ಣ ಅವರಿಗಾಗಿ ತಲಾಶ್‌ ನಡೆಸುತ್ತಿತ್ತು.

ದೇವೇಗೌಡರ ಮನೆಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ತಂಡವು ರೇವಣ್ಣ ಅವರ ಚಲನವನದ ಮೇಲೆ ನಿಗಾವಹಿಸಿತ್ತು. ಶನಿವಾರ ಸಂಜೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಎಸ್‌ಐಟಿ ತಂಡ ಪದ್ಮನಾಭನಗರದ ಎಚ್‌.ಡಿ.ದೇವೇಗೌಡರ ಮನೆ ಬಳಿ ತೆರಳಿದೆ. ಈ ವೇಳೆ ಎಚ್‌.ಡಿ.ರೇವಣ್ಣ ಅವರು ಬಾಗಿಲು ತೆರೆದುಕೊಂಡು ಹೊರಗೆ ಬಂದಿದ್ದಾರೆ. ಕೂಡಲೇ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದು ಸಿಐಡಿ ಕಚೇರಿಗೆ ತಂದಿದ್ದಾರೆ.

ಇಡೀ ರಾತ್ರಿ ತಲಾಶ್‌ ನಡೆಸಿದ್ದ ಎಸ್‌ಐಟಿ:

ತನ್ನ ವಿರುದ್ಧ ಮಹಿಳೆಯ ಅಪಹರಣ ಆರೋಪದ ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್‌.ಡಿ.ರೇವಣ್ಣ ತಲೆಮರೆಸಿಕೊಂಡಿದ್ದರು. ಮಹಿಳೆ ಮತ್ತು ಎಚ್‌.ಡಿ.ರೇವಣ್ಣನ ಪತ್ತೆಗೆ ಎಸ್ಐಟಿ ವಿಶೇಷ ತಂಡಗಳು ಮೈಸೂರು, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಎಚ್‌.ಡಿ.ರೇವಣ್ಣ ಹಾಗೂ ಅವರ ಸ್ನೇಹಿತರಿಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ತಲಾಶ್‌ ನಡೆಸಿದ್ದವು. ರೇವಣ್ಣ ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಲುಕೌಟ್‌ ನೋಟಿಸ್‌ ಜಾರಿಗೊಳಿಸಿದ್ದವು. ಇನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ರೇವಣ್ಣನ ಆಪ್ತ ರಾಜಗೋಪಾಲ್‌ ಎಂಬುವವರ ತೋಟದ ಮನೆಯಲ್ಲಿ ಮಹಿಳೆ ಇರುವುದನ್ನು ಪತ್ತೆಹಚ್ಚಿದ ಎಸ್‌ಐಟಿ ತಂಡವು ಶನಿವಾರ ಮಧ್ಯಾಹ್ನ ಅಲ್ಲಿಗೆ ತೆರಳಿ ಆಕೆಯನ್ನು ರಕ್ಷಿಸಿತ್ತು. ಇನ್ನು ಶನಿವಾರ ಸಂಜೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ರೇವಣ್ಣನನ್ನು ಎಸ್ಐಟಿ ಬಂಧಿಸಿದೆ.

ಏನಿದು ಪ್ರಕರಣ?

ಮಹಿಳೆ ಅಪಹರಣ ಸಂಬಂಧ ಆ ಮಹಿಳೆಯ ಪುತ್ರ ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಮೇ 2ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸತೀಶ್‌ ಬಾಬು ಎಂಬುವವರ ವಿರುದ್ಧ ಅಪಹರಣ ಆರೋಪದಡಿ ಎಫ್‌ಐಆರ್‌ ದಾಖಲಾಗಿತ್ತು. ಈ ಮಹಿಳೆ ಈ ಹಿಂದೆ ಎಚ್‌.ಡಿ.ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಾಗ ಸಂಸದ ಪ್ರಜ್ವಲ್‌ ರೇವಣ್ಣ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವೂ ಕೇಳಿ ಬಂದಿತ್ತು. ಲೈಂಗಿಕ ದೌರ್ಜನ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅಪಹರಣವಾಗಿರುವ ತಾಯಿತ ಜೀವಕ್ಕೆ ಅಪಾಯವಿದೆ ಎಂದು ಪುತ್ರ ದೂರಿನಲ್ಲಿ ತಿಳಿಸಿದ್ದರು. ಎಚ್‌.ಡಿ.ರೇವಣ್ಣ ಮತ್ತು ಸತೀಶ್‌ ಬಾಬು ಮೇಲೆ ಕ್ರಮ ಕೈಗೊಂಡು ತಾಯಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.