ಮರಿಯಮ್ಮನಹಳ್ಳಿ: ಸಮೀಪದ ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ಬೆಳಗ್ಗೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಜನರು ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಸರಣಿ ಅಪಘಾತದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಹೋಬಳಿಯ ಕಿತ್ನೂರು ಗ್ರಾಮದ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನೆಡೆದಿದೆ. ಗ್ರಾಮದ ನಾಗಪ್ಪ (56), ಪುತ್ರ ಕೊಟ್ರೇಶ್ (22), ಪುತ್ರಿ ಸುಜಾತಾ (35) ಹಾಗೂ ತಿಮ್ಮಲಾಪುರ ಗ್ರಾಮದ ದುರುಗಪ್ಪ (55) ಮೃತ ದುರ್ದೈವಿಗಳು.ಸರಣಿ ಲಾರಿ ಅಪಘಾತದಲ್ಲಿ ಸುಜಾತಾ, ದುರುಗಪ್ಪ ಎಂಬುವವರು ಸ್ಥಳದಲ್ಲೇ ಮೃತಪಟ್ಟರೆ, ಸುಜಾತಾಳ ತಂದೆ ನಾಗಪ್ಪ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಕೊಟ್ರೇಶ್ (22) ಎಂಬುವವರು ಧಾರವಾಡದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಜಾತಾಳ ಪತಿ ಜಂಬುನಾಥ ಎಂಬವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಇವರನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಯೆ ನೋಡಲು ಹೋಗಿದ್ದ ಕುಟುಂಬ:ಕಿತ್ನೂರು ಗ್ರಾಮದ ಒಂದೇ ಕುಟುಂಬದ ನಾಲ್ಕು ಜನರು ಎರಡು ಬೈಕ್‌ನಲ್ಲಿ ಕೊಟ್ರೇಶ್ ಎಂಬವರಿಗೆ ಕನ್ಯೆ ನೋಡಲು ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗುತ್ತಿದ್ದರು. ಡಣಾಪುರ ಸೇತುವೆ ಬಳಿ ಲಾರಿಯೊಂದು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ಮೂವರನ್ನು ಲಾರಿ ಬಲಿ ತೆಗೆದುಕೊಂಡಿದೆ.
ಬೆಳ್ಳುಳ್ಳಿ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮೊದಲು ಗಾಳೆಮ್ಮನಗುಡಿಯ ಬಳಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು, ನಂತರ ಕಾರಿಗೆ, ಡಣಾಪುರ ಗ್ರಾಮದ ಬಳಿಯ ಬಿಎಂಎಂ ಕಾರ್ಖಾನೆ ಸಮೀಪದ ಸೇತುವೆ ಮೇಲೆ ಬಸ್ ಹಿಂಭಾಗಕ್ಕೆ ಭೀಕರವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಭಾರೀ ಅವ್ಯವಸ್ಥೆ ಉಂಟಾಯಿತು.
ಸರ್ಕಾರಿ ಬಸ್ಸಿಗೂ ಡಿಕ್ಕಿ:
ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾಗಿವೆ. ಹೊಸಪೇಟೆಯ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 15 ಜನರು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ 10 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.ಲಾರಿ ಅಪಘಾತದ ನಂತರ ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು ಮೂರು ಕಿ.ಮೀ.ವರೆಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಟ್ರಾಫಿಕ್ ಜಾಮ್ ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಮಧ್ಯಾಹ್ನ ಸುಗಮಗೊಂಡಿತು.
ಎಸ್ಪಿ ಎಸ್. ಜಾಹ್ನವಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಹ.ಬೊ.ಹಳ್ಳಿ ಸಿಪಿಐ ವಿಕಾಸ ಲಮಾಣಿ, ಪಟ್ಟಣದ ಪಿಎಸ್‌ಐ ತಾರಾಬಾಯಿ ಸೇರಿದಂತೆ ವಿವಿಧ ಭಾಗದ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಲಾರಿ ಚಾಲಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಚಾಲಕ ಪಾನಮತ್ತನಾಗಿದ್ದನು ಎನ್ನುವ ಸಂಗತಿ ಹೊರ ಬಿದ್ದಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.