ಹುಬ್ಬಳ್ಳಿ: ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ನೀಡುವ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳ ನಡೆ ಖಂಡಿಸಿ ಭಾನುವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹು-ಧಾ ಮಹಾನಗರ ಜೆಡಿಎಸ್‌ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಈ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿದ್ದು, ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ಈ ಮಸೂದೆಯನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು 1995-96ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಂಡಿಸಿ, ಮಹಿಳೆಯರಿಗೆ ಶೇ. 33 ಅವಕಾಶ ನೀಡಬೇಕು ಎಂದು ನಿರ್ಧರಿಸಿದ್ದರು. ಆದರೂ ಇಂದಿನ ವರೆಗೂ ಅದು ಜಾರಿಗೆ ಬಂದಿಲ್ಲ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಜಿಪಂ, ತಾಪಂ ಹಾಗೂ ನಗರಸಭೆಗಳಲ್ಲಿ ಶೇ. 33 ಮಹಿಳಾ ಮೀಸಲಾತಿ ನೀಡುವ ಮೂಲಕ ಮಹಿಳೆಯರಿಗೆ ಅಧಿಕಾರ ನೀಡಿದವರು ಎಂಬುದನ್ನು ಸ್ಮರಿಸಲಾಯಿತು.

ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೇ. 33 ಮೀಸಲಾತಿಯನ್ನು ಲೋಕಸಭೆಯಲ್ಲಿ ಮಂಡಿಸಿದರೂ ಕಾಂಗ್ರೆಸ್ ಅದನ್ನು ವಿರೋಧಿಸಿ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಹಿಂದಿನಿಂದಲೂ ಮಹಿಳೆಯರು, ದಲಿತರು, ಮುಸ್ಲಿಮರು ಹಾಗೂ ಹಿಂದುಳಿದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ರಾಜ್ಯ ವಕ್ತಾರ ಹಾಗೂ ಹು-ಧಾ ಮಹಾನಗರ ಜೆಡಿಎಸ್‌ ಅಧ್ಯಕ್ಷ ಗುರುರಾಜ ಹುಣಸಿಮರದ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಸವದತ್ತಿ, ರಾಜ್ಯ ಸೇವಾದಳದ ಅಧ್ಯಕ್ಷ ಬಸವರಾಜ ಪದಯಾತ್ರಿ, ಮುಖಂಡರಾದ ಲಕ್ಷ್ಮೀ ಹಿಂಡಸಗೇರಿ, ರತ್ನಾ ಬದ್ದಿ, ಸರಸ್ವತಿ ಕಟ್ಟಿಮನಿ, ಪೂಜಾ ಮೆಣಸಿನಕಾಯಿ, ಸುನೀತಾ ಮಠ, ಮಂಜುನಾಥ ಹಗೇದಾರ, ಗಂಗಾಧರ ಪೇರೂರ್, ಶಂಕರ್ ಪವಾರ್ ಸೇರಿದಂತೆ ಹಲವರಿದ್ದರು.