ನರಿ ಬುದ್ಧಿ ಪಾಕಿಸ್ತಾನವನ್ನು ಬಗ್ಗು ಬಡಿಯಿರಿ

| Published : May 11 2025, 11:48 PM IST

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ವತಿಯಿಂದ ಭಾನುವಾರ ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸೇನೆಯ ಪರ ಜೈಕಾರ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪೆಹಲ್ಗಾಮ್‌ ನರಮೇಧಕ್ಕೆ ಪ್ರತಿಯಾಗಿ ಕಳೆದ ನಾಲ್ಕು ದಿನಗಳಿಂದ ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ವತಿಯಿಂದ ಭಾನುವಾರ ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸೇನೆಯ ಪರ ಜೈಕಾರ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಬೆಳಗ್ಗೆ 11 ಗಂಟೆಗೆ ಪಟ್ಟಣದ ಟೋಲ್‌ಗೇಟ್‌ ಬಳಿ ನೂರಾರು ಮಂದಿ ರೈತ ಸಂಘಟನೆ ಮುಖಂಡರು ಜಮಾಯಿಸಿ ಬಳ್ಳಾರಿ ರಸ್ತೆಯಲ್ಲಿ ಭಾರತ ಪರ ಜಯಘೋಷ ಮೊಳಗಿಸಿದರು. ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನೆ ಕ್ರಮದ ಬಗ್ಗೆ ಜೈಕಾರಮೊಳಗಿಸಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ವಿಜಯೋತ್ಸವದ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಭಯೋತ್ಪಾದಕರನ್ನು ಫೋಷಿಸುವ ಮೂಲಕ ಪಾಕಿಸ್ತಾನ ಪದೇಪದೇ ಭಾರತದ ಮೇಲೆ ದಾಳಿ ನಡೆಸುತ್ತಿದ್ದು ಸರಿಯಾಗಿ ಪಾಠ ಕಲಿಸಬೇಕು. ಕಳೆದ ನಾಲ್ಕು ದಿನಗಳಿಂದ ಕ್ಷಿಪಣಿಗಳನ್ನು ಹೊಡೆದುರಳಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿಕಲಿಸಿದೆ.ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಭಾರತ ಸೇನೆಗೆ ತಾಲೂಕು ರೈತ ಸಂಘದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನ ಕಪಟ ನಾಟಕವಾಡುತ್ತಿದ್ದು ಪಾಕಿಸ್ತಾನದ ಕುತಂತ್ರ ಪದೇ ಪದೇ ಬಯಲಾಗುತ್ತಿದೆ. ಈ ನರಸತ್ತ ಪಾಪಿ ರಾಷ್ಟ್ರವನ್ನು ಯಾವುದೇ ಕಾರಣಕ್ಕೂ ನಂಬಬಾರದು. ವಿರಾಮದ ಬಳಿಕವೂ ಭಾರತದ ಮೇಲೆ ದಾಳಿ ಆರಂಭಿಸಿದೆ ಎಂದರೆ ಇದರ ನರಿ ಬುದ್ಧಿ ಎಷ್ಟರ ಮಟ್ಟಿಗೆ ಇದೆ. ಪಾಕಿಸ್ತಾನದ ಧೋರಣೆಯನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತಿದೆ ಎಂದರು.

ನಿವೃತ್ತ ಯೋಧ ರಾಜವಂತಿ ಮೈಲಾರಪ್ಪ ಮಾತನಾಡಿ ಕುತಂತ್ರಿ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ನಂಬಬಾರದು. ನಾನು ಸೇನೆಯಲ್ಲಿದ್ದ ವೇಳೆ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡಿದ್ದೇನೆ. ಕಳೆದ ನಾಲ್ಕು ದಿನಗಳಿಂದ ಪಾಕ್‌ ವಿರುದ್ಧ ಭಾರತ ನಡೆಸಿದ ದಾಳಿ ಬಗ್ಗೆ ಹೆಮ್ಮೆ ಎನಿಸುತ್ತದೆ.ಈಗಲೂ ಸೇನೆಗೆ ಹೋಗಿ ಸೇವೆ ಮಾಡಲು ಸಿದ್ದರಂದು ಭಾರತ ಸೇನೆಯನ್ನು ಕೊಂಡಾಡಿದರು.

ಇದೇ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು, ಗುಂಡ್ಲಹಳ್ಳಿ ರಮೇಶ್‌,ರೊಪ್ಪ ಮರ್ಜನ್‌ ಗೋವಿಂದಪ್ಪ, ಪೂಜಾರ್‌ ಚಿತ್ತಯ್ಯ,ಗೋಪಾಲಪ್ಪ,ಸಿ.ಕೆ.ಪುರ ನಾಗೇಂದ್ರಪ್ಪ,ಉದ್ದಂಡಪನಪಾಳ್ಯ ನಾಗಪ್ಪ, ಮೈಲಾರಲಿಂಗಪ್ಪ, ನರಸಪ್ಪ, ಬ್ಯಾಡನೂರು ಕದುರಣ್ಣ, ಹನುಮಂತರಾಯಪ್ಪ, ಈಶ್ವರಪ್ಪ, ಮಲ್ಲಿಕಾರ್ಜುನಪ್ಪ, ನಾಗೇಂದ್ರಪ್ಪ ಇತರೆ ಅನೇಕ ಮಂದಿ ರೈತ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

-