ಸಾರಾಂಶ
ದಶಕಗಳು ಕಳೆದರೂ ಸುಣ್ಣಬಣ್ಣವಿಲ್ಲ । ತಡೆಬೇಲಿ ತುಕ್ಕು ಹಿಡಿದು ಕಳಚಿ ಬೀಳುವ ಹಂತ । ನಿಯಂತ್ರಣ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಸುಣ್ಣ ಬಣ್ಣವಿಲ್ಲ ವಿರಲಿ ಕನಿಷ್ಠ ತಡೆ ಬೇಲಿಗಳು ತುಕ್ಕು ಹಿಡಿದು ತುಂಡಾಗಿ ನೇತಾಡುತ್ತಿವೆ. ಈಗಲೂ ಆಗಲೋ ಕಳಚಿ ತುಂಗಾ ನದಿಗೆ ಬೀಳುವ ಹಂತದಲ್ಲಿದೆ. ಸೇತುವೆಗೆ ಸಾಗುವ ಆರಂಭದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ನಿತ್ಯ ಸಂಚಾರಿಗಳ ಪಾಲಿಗೆ ಅಪಾಯದ ಕರೆಗಂಟೆ ಯಾಗಿದ್ದರೂ ದಶಕಗಳಿಂದ ದುರಸ್ತಿ ಭಾಗ್ಯವಿಲ್ಲದಂತಾಗಿದೆ ಸುಂಕದಮಕ್ಕಿ ಯಡದಳ್ಳಿ ಸಂಪರ್ಕ ಕಲ್ಪಿಸುವ ತುಂಗಾ ತೂಗು ಸೇತುವೆಯ ದುಸ್ಥಿತಿ.ಕೆರೆ ಗ್ರಾಮಪಂಚಾಯಿತಿ ಹಾಗೂ ನೆಮ್ಮಾರು ಗ್ರಾಪಂ ಗಡಿಯಂಚಿನ ಈ ಸೇತುವೆ 2006 ರಲ್ಲಿ ನಿರ್ಮಾಣ ಗೊಂಡಿದೆ. ಅಂದಿನಿಂದಲೂ ಇದಕ್ಕೆ ಸುಣ್ಣಬಣ್ಣವಾಗಲೀ, ದುರಸ್ತಿಯಾಗಲೀ ಆಗಿರುವುದು ಕಂಡುಬಂದಿಲ್ಲ. ಸಂಪೂರ್ಣ ಶಿಥಿಲಾವಸ್ಥೆಯ ಅಂಚಿಗೆ ತಲುಪಿರುವ ಈ ಸೇತುವೆ ದಿನೆ ದಿನೇ ಅಪಾಯದಂಚಿಗೆ ತಲುಪುತ್ತಿದೆಯಾದರೂ ಇದರ ಸಂರಕ್ಷಣೆಗೆ ಮುಂದಾಗಿಲ್ಲ.
ಯಡದಳ್ಳಿ, ಯಡದಳ್ಳಿ ಕಾಲನಿ, ಹರೆಬಿಳಲು, ಸುಂಕದಮಕ್ಕಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮ, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಈ ಸೇತುವೆಯಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ನೆಮ್ಮಾರು, ಶೃಂಗೇರಿಗೆ ಬರಬೇಕಾದರೆ ಈ ಸೇತುವೆ ಮೇಲೆಯೇ ಹಾದು ಬರಬೇಕಿದೆ. ಇದನ್ನು ಬಿಟ್ಟರೆ ಯಡದಾಳು, ಹುಲುಗಾರು ಮಾಣಿಬೈಲು ರಸ್ತೆಯ ಮೂಲಕ ಸುಮಾರು 15-20 ಕಿ. ಮೀ. ಸುತ್ತು ಹಾಕಿ ನೆಮ್ಮಾರಿಗೆ ಬರಬೇಕು. ಬಸ್ ಸೌಕರ್ಯವಿಲ್ಲ. ಖಾಸಗಿ ವಾಹನಗಳನ್ನು ಹೊರತು ಪಡಿಸಿದರೆ ಕಾಲ್ನಡಿಗೆಯಲ್ಲಿಯೇ ಬರಬೇಕು.ಗ್ರಾಮಸ್ಥರು ಮಾತ್ರವಲ್ಲದೇ ವೃದ್ದರು, ಮಹಿಳೆಯರು, ಶಾಲಾ ಕಾಲೇಜು ಮಕ್ಕಳು ಕೂಡ ಈ ಸೇತುವೆಯನ್ನೇ ಅವಲಂಬಿಸಬೇಕಿದೆ. ಹತ್ತಿರದ ಹಾಗೂ ಪ್ರಮುಖ ಕೇಂದ್ರ ಬಿಂದು ರಸ್ತೆ ಇದಾಗಿದೆ. ಈ ಹಿಂದೆ ಇದು ನಕ್ಸಲ್ ಪ್ರಭಾವಿತ ಪ್ರದೇಶವಾಗಿದ್ದರೂ ನಕ್ಸಲ್ ವಿಶೇಷ ಪ್ಯಾಕೇಜ್ ಅನುದಾನ ಯೋಜನೆಯಡಿ ಇಲ್ಲಿಗೆ ಯಾವುದೇ ಅನುದಾನ ವಾಗಲೀ, ದುರಸ್ತಿ ಭಾಗ್ಯವಾಗಲೀ ಸಿಕ್ಕಿಲ್ಲ. ಶಿಥಿಲಗೊಂಡ ಈ ಸೇತುವೆ ಮೇಲೆಯೇ ಓಡಾಡುವ ದಯನೀಯ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ಗ್ರಾಮಸ್ಥರು ಸಂಬಂಧ ಪಟ್ಟ ಸ್ಥಳೀಯ ಆಡಳಿತ, ಜನಪ್ರತಿನಿದಿಗಳಿಗೆ, ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆಯಿಲ್ಲದಂತಾಗಿದೆ. ವಾರ್ಡ್ ಸಭೆ, ಗ್ರಾಮ ಸಭೆ, ಜನಸಂಪರ್ಕ ಸಭೆಗಳಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಅಹವಾಲನ್ನು ಮಂಡಿಸಿ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ ಮಾಡಿಕೊಂಡು ಬರಲಾಗುತ್ತಿದೆ. ತುಂಗಾನದಿಯಲ್ಲಿ ಮಳೆಗಾಲದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುವುದರಿಂದ ತುಕ್ಕು ಹಿಡಿದು, ಶಿಥಿಲಗೊಂಡಿರುವ ಈ ತೂಗು ಸೇತುವೆ ಮೇಲೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಜೀವ ಅಂಗೈಯಲ್ಲಿಟ್ಟು ಓಡಾಡಬೇಕಿದೆ. ಅಲ್ಲದೇ ಪ್ರವಾಸಿಗರೂ ಕೂಡ ವೀಕ್ಷಣೆಗೆಂದು ಈ ಸೇತುವೆ ಮೇಲೆ ನಿಲ್ಲುತ್ತಾರೆ. ಸೇತುವೆ ನಿರ್ಮಾಣಗೊಂಡು 20 ವರ್ಷಗಳು ಕಳೆದರೂ ಕಳೆದ 10 ವರ್ಷಗಳಿಂದ ಸೇತುವೆಗೆ ಯಾವುದೇ ಕಾಯಕಲ್ಪ ಒದಗಿಸಿಲ್ಲ.ಈ ಭಾಗದಲ್ಲಿ ಭಾರೀ ಮಳೆ ಬೀಳುವುದರಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾದಾಗ ಹೆಂಗಸರು, ಮಕ್ಕಳಿಗೆ ಓಡಾಡಲು ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ, ಗ್ರಾಮಸ್ಥರ ಹಿತದೃಷ್ಠಿಯಿಂದ ಅಪಾಯ, ಅನಾಹುತಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಸರ್ಕಾರ, ಜನಪ್ರತಿನಿಧಿಗಳು ಶಿಥಿಲಗೊಂಡಿರುವ ಈ ಸೇತುವೆಗೆ ಮಳೆಗಾಲದ ಮುನ್ನ ಕಾಯಕಲ್ಪ ಒದಗಿಸಬೇಕಿದೆ.
-- ಬಾಕ್ಸ್--ತುರ್ತಾಗಿ ದುರಸ್ತಿಭಾಗ್ಯ ಕಲ್ಪಿಸಿ:
ನೆಮ್ಮಾರು ಸುಂಕದಮಕ್ಕಿ, ಯಡದಳ್ಳಿ ಸಂಪರ್ಕ ಕಲ್ಪಿಸುವ ಈ ಸೇತುವೆ ಸುತ್ತಮಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ತುರ್ತಾಗಿ ತುಕ್ಕು ಹಿಡಿದು ಕಳಚಿ ಬೀಳುವ ತಡೆಬೇಲಿಯನ್ನು ಸರಿಪಡಿಸಿ ದುರಸ್ತಿ ಮಾಡಬೇಕಿದೆ. ಸುಣ್ಣ ಬಣ್ಣ , ದ ಮೂಲಕ ಕಾಯಕಲ್ಪ ಒದಗಿಸಿ ಗ್ರಾಮಸ್ಥರು,ಶಾಲಾ ಕಾಲೇಜು ವಿದ್ಯಾರ್ಥಿಗಳು ನಿರ್ಭಿತಿಯಿಂದ ಓಡಾಡುವಂತೆ ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರಾದ ಕೃಷ್ಣ--
ಸರ್ಕಾರ, ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಲಿ.ಸೇತುವೆ ಶಿಥಿಲಗೊಳ್ಳುತ್ತಿದ್ದು, ದಿನೇ ದಿನೇ ಅಪಾಯದಂಚಿಗೆ ತಲುಪುತ್ತಿದೆ. ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವುದರಿಂದ ತುಂಗಾ ನದಿ ಉಕ್ಕಿ ಹರಿಯುವುದರಿಂದ ತಡೆಬೇಲಿ ತುಂಡಾಗುತ್ತಿರುವುದು ಅಪಾಯಕಾರಿ ಯಾಗಲಿದೆ. ರಾಜ್ಯದ ವಿವಿಧೆಡೆ ಕಾಲು ಸಂಕಗಳಲ್ಲಿ ಅನಾಹುತ ಉಂಟಾಗಿ ಅನೇಕ ಜೀವ ಬಲಿಯಾಗಿರುವುದು ಘಟನೆ ನಮ್ಮ ಕಣ್ಮುಂದೆ ಇದೆ. ಇನ್ನಾದರೂ ಸರ್ಕಾರ ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಬೇಕು. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಸುಂದರೇಶ್ ಆಗ್ರಹಿಸಿದ್ದಾರೆ.
11 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಸುಂಕದಮಕ್ಕಿ ಯಡದಳ್ಳಿ ಸಂಪರ್ಕ ತೂಗು ಸೇತುವೆ ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪಿರುವುದು.
11 ಶ್ರೀ ಚಿತ್ರ 2-ಸುಂಕದಮಕ್ಕಿ ಯಡದಳ್ಳಿ ಸಂಪರ್ಕ ತೂಗೂ ಸೇತುವೆ ತಡೆಬೇಲಿ ಸಂಪೂರ್ಣ ತುಕ್ಕು ಹಿಡಿದು ತುಂಡಾಗಿ ಕಳಚಿ ಬೀಳುವ ಹಂತಕ್ಕೆ ತಲುಪಿರುವುದು.