ಅಸಮಾನತೆ ತೊಲಗಿದಲ್ಲಿ ಭಾತೃತ್ವ ಬೆಳೆಯಲು ಸಾಧ್ಯ: ಫಕೀರ ಸಿದ್ಧರಾಮ ಶ್ರೀ

| Published : Dec 13 2023, 01:00 AM IST

ಅಸಮಾನತೆ ತೊಲಗಿದಲ್ಲಿ ಭಾತೃತ್ವ ಬೆಳೆಯಲು ಸಾಧ್ಯ: ಫಕೀರ ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ಪಟ್ಟಣದ ಜ. ಫಕೀರೇಶ್ವರ ಮಠಕ್ಕೆ ತಾಳಿಕೋಟಿ ತಾಲೂಕಿನ ಬಂಡೆಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಭಕ್ತರಿಂದ ೨೨ ಟ್ರ್ಯಾಕ್ಟರ್ ಮೂಲಕ ಮಠಕ್ಕೆ ತಂದ ಕಲ್ಲುಗಳನ್ನು ಫಕೀರೇಶ್ವರ ಸಂಸ್ಥಾನ ಮಠದ ೧೩ನೇ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮೀಜಿ ಸ್ವೀಕರಿಸಿದರು.

ಬಂಡೆಪ್ಪನಹಳ್ಳಿ 22 ಟ್ರ್ಯಾಕ್ಟರ್‌ಗಳಲ್ಲಿ ತಂದ ಕಲ್ಲುಗಳನ್ನು ಸ್ವೀಕರಿಸಿದ ಶ್ರೀಶಿರಹಟ್ಟಿ: ಸಮಾಜದಲ್ಲಿ ಶಾಂತಿ ಸಾಮರಸ್ಯ ಮತ್ತು ಭಾತೃತ್ವ ಬೆಳೆಯಬೇಕಾದರೆ ಮೊದಲು ನಮ್ಮಲ್ಲಿನ ಅಸಮಾನತೆಯನ್ನು ತೊಲಗಿಸಬೇಕು. ಪರಸ್ಪರ ಪ್ರೀತಿ ವಿಶ್ವಾಸ ಎಲ್ಲರಲ್ಲಿಯೂ ಅತ್ಯಗತ್ಯ. ಮಾನವ ಬಂಧುತ್ವ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಿದೆ ಎಂದು ಫಕೀರೇಶ್ವರ ಸಂಸ್ಥಾನ ಮಠದ ೧೩ನೇ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಮಂಗಳವಾರ ಪಟ್ಟಣದ ಜ. ಫಕೀರೇಶ್ವರ ಮಠದ ಆವರಣದಲ್ಲಿ ತಾಳಿಕೋಟಿ ತಾಲೂಕಿನ ಬಂಡೆಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಭಕ್ತರಿಂದ ೨೨ ಟ್ರ್ಯಾಕ್ಟರ್ ಮೂಲಕ ಮಠಕ್ಕೆ ತಂದ ಕಲ್ಲುಗಳನ್ನು ಸ್ವೀಕರಿಸಿ ಮಾತನಾಡಿದರು. ಮಠದ ಮೂಲ ಸಿದ್ಧಾಂತ ಹಾಗೂ ತತ್ವಗಳ ಹಿನ್ನೆಲೆ ಮತ್ತು ಪರಂಪರೆ ನಾಡಿಗೆ ಮಾದರಿಯಾಗಿದ್ದು, ಅದು ಜಗತ್ತಿನೆಲ್ಲೆಡೆ ಪಸರಿಸಬೇಕು. ತತ್ವ ಸಿದ್ಧಾಂತಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರದೇ ಕಾರ್ಯರೂಪಕ್ಕೆ ಬರಬೇಕು. ಇದು ನಮ್ಮ ಆಶಯ ಎಂದು ಹೇಳಿದರು. ನಮ್ಮ ಉದ್ದೇಶ ಸ್ಪಷ್ಟ ಹಾಗೂ ಸಕಾರಾತ್ಮಕವಾಗಿರಬೇಕು. ಮನಸ್ಸಿನಲ್ಲಿ ಕಹಿ ಭಾವನೆಗೆ ಅವಕಾಶ ನೀಡಬಾರದು. ಅಚಾತುರ್ಯ ಹಾಗೂ ಅವಘಡಗಳಿಗೆ ಅವಕಾಶ ನೀಡದೇ ಸಾಮಾಜಿಕ ಚಿಂತನೆಯತ್ತ ನಮ್ಮ ಗಮನವಿರಬೇಕು. ಅದು ಭಗವಂತನ ಹೃದಯಕ್ಕೆ ಸಮೀಪವಿರುತ್ತದೆ. ಅಂತಹ ರಚನಾತ್ಮಕ ಅಂಶಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಯುವ ಸಮೂಹ ಜಾಗೃತಗೊಳ್ಳಬೇಕಾದ ಅವಶ್ಯಕತೆಯಿದೆ. ತಾತ್ಕಾಲಿಕ ಸುಖಕ್ಕಾಗಿ ತಮ್ಮ ಅತ್ಯಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳದೇ ಉತ್ತಮ ಹಾಗೂ ಆದರ್ಶಮಯವಾದ ಬದುಕನ್ನು ಕಟ್ಟಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಮಠದ ಅಭಿವೃದ್ಧಿ ಕಾರ್ಯಗಳು ಭಕ್ತರಿಂದ ಸಾಧ್ಯವಾಗಿದ್ದು, ಭಕ್ತರ ಆಪೇಕ್ಷೆಯಂತೆ ಮಠದ ಜೀರ್ಣೋದ್ಧಾರ ಕೆಲಸಗಳು ಪ್ರಗತಿಯಲ್ಲಿವೆ ಎಂದರು.ತಾಳಿಕೋಟೆ ತಾಲೂಕಿನ ಬಂಡೆಪ್ಪನಹಳ್ಳಿ ಗ್ರಾಮದಿಂದ ಧಾರ್ಮಿಕ ಜಾಗೃತಿ ಸ್ತಬ್ಧ ಚಿತ್ರ ಹಾಗೂ ಮೆರವಣಿಗೆ ಆರಂಭವಾಗಲಿದ್ದು, ಈ ಕುರಿತು ರೂಪುರೇಷೆ ಸಿದ್ಧಗೊಳ್ಳಲಿದೆ. ಇದಕ್ಕಾಗಿ ಎಲ್ಲ ಭಕ್ತರ ಸಹಾಯ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಮಠಗಳು ಜಾತಿ ಬೆಳೆಸುವ ಬದಲು ದೇಶ ಬೆಳೆಸುವ ಉದ್ದೇಶ ಹೊಂದಬೇಕು. ದೇವರನ್ನು ಮಂದಿರಗಳಲ್ಲಿ ನೋಡುವ ಬದಲು ಮನೆಯವರ ಪ್ರೀತಿಯಲ್ಲಿ ಕಾಣಬೇಕು ಎಂದರು.

ಮನೆಯಲ್ಲಿ ಆಧ್ಯಾತ್ಮಿತ ವಾತಾವರಣ ಬೆಳೆಸಿದರೆ ಮಕ್ಕಳು ಸನ್ನಡತೆ ಹೊಂದುತ್ತಾರೆ. ಸೂಕ್ಷ್ಮ ಮನಸ್ಸುಗಳಿಂದ ಆಧ್ಯಾತ್ಮದ ಶಕ್ತಿಯನ್ನು ಬೆಳಗಿಸಿ ದೇಶ ಕಟ್ಟಬೇಕು. ಸಮಾಜದಲ್ಲಿ ತನಗಾಗಿ ಬದುಕದೆ ಇತರರಿಗಾಗಿ ಸಮಯ ಮೀಸಲಿಟ್ಟರೆ ಜೀವಿಸಿದ್ದು ಸಾರ್ಥಕ. ಅಂಥಹ ಕೆಲಸ ಕಾರ್ಯಗಳಲ್ಲಿ ಬಂಡೆಪ್ಪನಹಳ್ಳಿ ಜನತೆ ಮುಂದಿದ್ದಾರೆ ಎಂದರು. ಆಧ್ಯಾತ್ಮಿಕತೆಯಿಂದ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಪ್ರದಾಯ ಕಲಿಸಬೇಕು. ಪ್ರತಿಯೊಬ್ಬರಲ್ಲೂ ಆಧ್ಯಾತ್ಮಿತ ಶಕ್ತಿ ಅಡಗಿದೆ. ಅದನ್ನು ಬೆಳೆಸಲು ಮಠ ಮಂದಿರದಿಂದ ಸಾಧ್ಯ. ದಿನದ ಕನಿಷ್ಠ ಸಮಯವನ್ನು ಭಗವಂತನ ಪ್ರಾರ್ಥನೆಗೆ ಬಳಸಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ. ಶಾಂತ ಮನಸ್ಸು ದೇಶವನ್ನು ಗೆಲ್ಲಿಸುವ ಶಕ್ತಿ ನೀಡುತ್ತದೆ. ಸಮಾಜದ ಬಗ್ಗೆ ಚಿಂತನೆ ಮತ್ತು ಕಾಳಜಿ ಇಟ್ಟುಕೊಂಡು ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳಬೇಕು. ಮಠ ಹಾಗೂ ಗುರುಗಳಿಂದ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಸಿದರು.

ಮಂಗಳವಾರ ಬೆಳಗ್ಗೆ ಪಟ್ಟಣದ ನೆಹರೂ ವೃತ್ತದಿಂದ ಕಲ್ಲುಗಳನ್ನು ಹೊತ್ತುಸಾಗಿದ ಟ್ರ್ಯಾಕ್ಟರ್ ವಾಹನಗಳು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮಠಕ್ಕೆ ಆಗಮಿಸಿದರು. ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಮಠಕ್ಕೂ ಬಂಡೆಪ್ಪನಹಳ್ಳಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದ್ದು, ಅಲ್ಲಿನ ಜನ ಶ್ರೀ ಮಠಕ್ಕೆ ನಡೆದುಕೊಳ್ಳುತ್ತಾರೆ. ಮೊಟ್ಟ ಮೊದಲು ಫಕೀರೇಶ್ವರ ಮಠ ಸ್ಥಾಪನೆಯಾಗಿದ್ದು ಬಂಡೆಪ್ಪನಹಳ್ಳಿಯಲ್ಲಿ ಎಂದು ತಿಳಿಸಿದ ಶ್ರೀಗಳು ಮೇಲು ಕೀಳು ಎಣಿಸದೇ ಎಲ್ಲರೂ ಒಂದೇ ಎಂದು ಭಾವಿಸಬೇಕು. ಈ ಪರಂಪರೆಗೆ ಹೊಂದಿಕೊಂಡು ಹೋಗಬೇಕು ಎಂದು ಹೇಳಿದರು.

ಸದ್ಯ ಮಠದ ಕಿರಿಯ ಶ್ರೀಗಳು (ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರರು) ಬಂದನಂತರ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆದಿದ್ದು, ಫಕೀರೇಶ್ವರರ ಆಶೀರ್ವಾದದಿಂದ ಎಲ್ಲವೂ ಸಲೀಸಾಗಿ ನಡೆದಿದೆ. ನಯ ವಿನಯದಿಂದ ಕಾರ್ಯ ಮಾಡಬೇಕು. ಅಂತಹ ಕಾರ್ಯದಲ್ಲಿ ನೀವೆಲ್ಲ ಅಗ್ರಗಣ್ಯರು ಎಂದು ತಿಳಿಸಿದರು. ಫಕೀರೇಶ್ವರರು ೪೫೦ ವರ್ಷಗಳ ಹಿಂದೆ ಬಂಡೆಪ್ಪನ ಹಳ್ಳಿಗೆ ಹೋಗಿದ್ದರು. ಆಗಿನ ಕಾಲದಲ್ಲಿ ಬರ ಬಿದ್ದ ವೇಳೆ ಕುಡಿಯಲು ನೀರಿಲ್ಲ ಎಂದು ಜನತೆ ನಿವೇದನೆ ಮಾಡಿದಾಗ ನೀರಿನ ಬವಣೆ ನೀಗಿಸಿದ್ದಾರೆ ಎಂದರು.