ಪೋಕ್ಸೋ ದೌರ್ಜನ್ಯ ಆಗದಂತೆ ತಡೆಗಟ್ಟಲು ಅಗತ್ಯ ಕ್ರಮ

| Published : Dec 13 2023, 01:00 AM IST

ಸಾರಾಂಶ

ಪೋಕ್ಸೋ ದೌರ್ಜನ್ಯ ಆಗದಂತೆ ತಡೆಗಟ್ಟಲು ಅಗತ್ಯ ಕ್ರಮಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡಫೋಟೋ- 12ಎಂವೈಎಸ್ 40ಕನ್ನಡಪ್ರಭ ವಾರ್ತೆ ಮೈಸೂರು

ಹದಿನೆಂಟು ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು ಈ ರೀತಿಯ ಪೋಕ್ಸೋ ದೌರ್ಜನ್ಯಗಳು ಆಗದಂತೆ ತಡೆಗಟ್ಟಲು ಅಗತ್ಯ ಕ್ರಮವನ್ನು ಮಕ್ಕಳ ರಕ್ಷಣಾ ಆಯೋಗ ಮತ್ತು ಸರ್ಕಾರದ ವತಿಯಿಂದ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಿಳಿಸಿದರು.

ನಗರದ ಚೆಲುವಾಂಬ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ವಿಭಾಗಕ್ಕೆ ಭೇಟಿ ನೀಡಿ ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಸಂತ್ರಸ್ತ ಮಗುವಿನ ಆರೋಗ್ಯ ವಿಚಾರಿಸಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ 3 ವರ್ಷದ ಮಗುವಿನ ಮೇಲೆ 59 ವರ್ಷದ ವ್ಯಕ್ತಿಯು ಲೈಂಗಿಕ ದೌರ್ಜನ್ಯ ಕೃತ್ಯವನ್ನು ಎಸೆಗಿದ್ದು, ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಸಂಬಂಧ ಆರೋಪಿಯನ್ನು ಪೊಲೀಸ್ ಇಲಾಖೆಯವರು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೋಕ್ಸೋ ಕಾಯ್ದೆ ಪ್ರಕರಣ ಆಗದಂತೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ಈ ರೀತಿ ಆಲೋಚನೆ ಇರುವ ದುರ್ಜನರಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಬಹು ಮುಖ್ಯ ಎಂದರು.

ಪೋಕ್ಸೋ ಕಾಯ್ದೆ ಅಡಿ ಪ್ರಸ್ತುತ 20 ವರ್ಷಗಳ ಜೈಲು ಶಿಕ್ಷೆ ಇದ್ದು ಸರ್ಕಾರದ ಜೊತೆ ಚರ್ಚಿಸಿ ಪೋಕ್ಸೋ ಕಾಯ್ದೆ ಯಲ್ಲಿ ದಾಖಲಾದ ಪ್ರಕರಣಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸುವ ಕಾಯ್ದೆ ತರುವ ಆಲೋಚನೆ ಇದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಈ ಹಿಂದೆ ಪೋಕ್ಸೋ ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಮೂಲಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪ್ರಕರಣ ಬೆಳಕಿಗೆ ಬರುತ್ತಿದ್ದು, ಅಂತಹ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕೇಸ್ ದಾಖಲಿಸಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಅಂತಹ ಸಂತ್ರಸ್ತ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಶ್ರಮಗಳಲ್ಲಿ ನೆರವು ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಬಾಲ್ಯ ವಿವಾಹಗಳಿಂದ ಬಾಲ ತಾಯಂದಿರ ಸಂಖ್ಯೆ ಹೆಚ್ಚಿದ್ದು 18 ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ಮದುವೆ ಮಾಡುವುದರಿಂದ ಬಾಲ ತಾಯಂದಿರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರಲ್ಲಿ ಇದರ ಕುರಿತು ಅರಿವು ಮೂಡಿಸಬೇಕು. ಈ ರೀತಿಯ ಪ್ರಕರಣಗಳಿಂದ ಮದುವೆಯಾದ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವವರೆಗೆ ಇಲಾಖೆಯ ವತಿಯಿಂದ ಆಶ್ರಯ ನೀಡಲಾಗುವುದು ಮತ್ತು ಪುರುಷರಿಗೆ ಜೈಲು ಶಿಕ್ಷೆ ನೀಡಲಾಗುತ್ತಿದೆ. ಒತ್ತಾಯ ಪೂರಕವಾಗಿ ಮಕ್ಕಳಿಗೆ ಮದುವೆ ಮಾಡಿಸಿ, ಜೈಲು ಶಿಕ್ಷೆ ಅನುಭವಿಸುವಂತೆ ಮಾಡಬೇಡಿ ಎಂದರು.