ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೌಲಭ್ಯ ಪಡೆದರು.
ಕನ್ನಡಪ್ರಭ ವಾರ್ತೆ ಚೇಳೂರು
ತಾಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಮತ್ತು ಆಕಾಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಯುಷ್ಮಾನ್ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಗ್ರಾಪಂ ಪಿಡಿಒ ಕೆ. ವೆಂಕಟಾಚಲಪತಿ ಮತ್ತು ಅಧ್ಯಕ್ಷೆ ಅನಿತಾ ವೆಂಕಟರೆಡ್ಡಿ ಅವರು ಉದ್ಘಾಟಿಸಿದರು.
ಸಭೆಯಲ್ಲಿ ಮಾತನಾಡಿದ ಪಿಡಿಒ ಕೆ. ವೆಂಕಟಾಚಲಪತಿ ಅವರು, ವಿಶೇಷ ಚೇತನರಿಗೆ ಸರ್ಕಾರಿ ಯೋಜನೆಗಳಲ್ಲಿ ಶೇಕಡಾ ಐದರಷ್ಟು ಸೌಲಭ್ಯಗಳನ್ನು ಮೀಸಲಿಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು. ಇದಕ್ಕಿಂತ ಮುಖ್ಯವಾಗಿ, ಸಾಮಾನ್ಯ ಜನರು ಸೌಲಭ್ಯ ಕೋರಿ ಸಲ್ಲಿಸಬಹುದಾದ ಎಲ್ಲಾ ಯೋಜನೆಗಳಿಗೂ ಸಹ ವಿಶೇಷ ಚೇತನರು ಯಾವುದೇ ತಡೆ ಇಲ್ಲದೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಜಿಲ್ಲಾ ಮಟ್ಟದಲ್ಲಿ ವಿಶೇಷ ಚೇತನರ ಕಲ್ಯಾಣಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ವಿಶ್ವ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೂಲಕ ಈ ಯೋಜನೆಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಶೇಷ ಚೇತನರ ಶಿಕ್ಷಣಕ್ಕೆ ಒತ್ತು ನೀಡಿದ ಪಿಡಿಒ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಶಾಲಾ ದಾಖಲಾತಿ ಕುರಿತು ನಾವೆಲ್ಲರೂ ಪ್ರಯತ್ನಿಸಬೇಕು. ಇದು ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ ಎಂದು ಕರೆ ನೀಡಿದರು.ವಿಶೇಷ ಚೇತನರಿಗೆ ಸಂಬಂಧಪಟ್ಟ ಇಲಾಖಾ ಆದೇಶಗಳು ಮತ್ತು ಯೋಜನೆಗಳ ಬಗ್ಗೆ ಎಲ್ಲರೂ ಸ್ಪಷ್ಟವಾಗಿ ತಿಳಿದುಕೊಂಡು ಅವುಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಸಿಆರ್‌ಪಿ ಮಂಜುನಾಥ ಮಾತನಾಡಿ, ವಿಶೇಷ ಚೇತನ ಮಕ್ಕಳನ್ನು ನಾವು ಪ್ರೀತಿಯಿಂದ ಮೇಲೆತ್ತಿಕೊಂಡು ಬಂದರೆ, ಆ ಮಗು ಕೂಡ ನಮ್ಮಂತೆಯೇ ಈ ಭೂಮಿ ಮೇಲೆ ಉತ್ತಮ ಜೀವನ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅವರಿಗೆ ನಾವು ಎಲ್ಲಾ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ, ಅವರು ಸಹ ಸಮಾಜದಲ್ಲಿ ಸಮಾನ ಜೀವನ ನಡೆಸಲು ಸಾಧ್ಯ ಎಂದು ನುಡಿದರು.ಆರೋಗ್ಯ ಶಿಬಿರದ ಮಾಹಿತಿ:
ಇದೇ ವೇಳೆ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ) ಅಪ್ಸನಾ ಮಾತನಾಡಿ, ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳ ಕುರಿತು ವಿವರಿಸಿದರು.ವಿಶೇಷ ಚೇತನರು ಆರೋಗ್ಯ ರಕ್ಷಣೆ ಮತ್ತು ಅಗತ್ಯ ಚಿಕಿತ್ಸೆಗಳಿಗಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಎಂ. ಅನಿತಾ ವೆಂಕಟರೆಡ್ಡಿ ಮಾತನಾಡಿ, ಗ್ರಾಮದ ಎಲ್ಲರೂ ವಿಶೇಷ ಚೇತನರಿಗೆ ಅಗತ್ಯ ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಪಂಚಾಯಿತಿಯ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೌಲಭ್ಯ ಪಡೆದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗೋಪಿನಾಥ್, ಕರ ವಸೂಲಿಗಾರ ಸುಧಾಕರ್, ಕ್ಲರ್ಕ್ ಕಂ, ಡಿಇಒ ಮಂಜುನಾಥ್, ವಿಆರ್‌ಡಬ್ಲ್ಯೂ ಅಲ್ಲಾ ಬಕಾಷ್, ಸ್ವಯಂ ಸೇವಾ ಸಮಿತಿ ಸತೀಶ್ ಸೇರಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.