ಬ್ಯಾಂಕುಗಳಲ್ಲಿ ಸ್ಥಳೀಯ ಕನ್ನಡ ಭಾಷೆಯಲ್ಲಿ ವ್ಯವಹರಿಸಿದಾಗ ಗ್ರಾಹಕರು ಹಾಗೂ ಅಧಿಕಾರಿ ಸಿಬ್ಬಂದಿ ನಡುವಿನ ವಿಶ್ವಾಸಾರ್ಹತೆ ಹೆಚ್ಚಲಿದೆ. ಹೀಗಾಗಿ ಕನ್ನಡ ಬಾರದ ಅಧಿಕಾರಿ ಸಿಬ್ಬಂದಿ ಕನ್ನಡ ಭಾಷೆ ಕಲಿಯುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಬ್ಯಾಂಕುಗಳಲ್ಲಿ ಸ್ಥಳೀಯ ಕನ್ನಡ ಭಾಷೆಯಲ್ಲಿ ವ್ಯವಹರಿಸಿದಾಗ ಗ್ರಾಹಕರು ಹಾಗೂ ಅಧಿಕಾರಿ ಸಿಬ್ಬಂದಿ ನಡುವಿನ ವಿಶ್ವಾಸಾರ್ಹತೆ ಹೆಚ್ಚಲಿದೆ. ಹೀಗಾಗಿ ಕನ್ನಡ ಬಾರದ ಅಧಿಕಾರಿ ಸಿಬ್ಬಂದಿ ಕನ್ನಡ ಭಾಷೆ ಕಲಿಯುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಲೀಡ್ ಬ್ಯಾಂಕ್ (ಮಾರ್ಗದರ್ಶಿ ಬ್ಯಾಂಕ್) ಸಹಯೋಗದೊಂದಿಗೆ ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಕಲಿಕೆ ತರಬೇತಿ ಶಿಬಿರವನ್ನು ಬಿಳಿ ಬೋರ್ಡ್ ಮೇಲೆ ಕನ್ನಡ ಕಲಿಯಿರಿ ಎಂದು ಬರೆಯುವ ಮೂಲಕ ಉದ್ಘಾಟಿಸಿದರು.

ಯಾವುದೇ ಸಂಸ್ಥೆ, ಕಚೇರಿಗಳಲ್ಲಿ ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಭಾಷೆ ಪರಿಣಾಮಕಾರಿ ಪಾತ್ರ ವಹಿಸಲಿದೆ. ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸಿದಾಗ ಅಧಿಕಾರಿ ಸಿಬ್ಬಂದಿ ಸಾರ್ವಜನಿಕರು ಗ್ರಾಹಕರ ನಡುವೆ ವಿಶ್ವಾಸ, ನಂಬಿಕೆ ವೃದ್ದಿಯಾಗಲಿದೆ. ಹೀಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಪ್ರಾಧನ್ಯತೆ ನೀಡಬೇಕು ಎಂದು ತಿಳಿಸಿದರು.

ಬ್ಯಾಂಕುಗಳಲ್ಲಿ ಕನ್ನಡ ಬಾರದ ಅಧಿಕಾರಿಗಳು ಸಿಬ್ಬಂದಿಯಿಂದ ವ್ಯವಹರಿಸಲು ತೊಡಕಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು. ಅನೇಕ ಸಾರ್ವಜನಿಕ, ರೈತ ಮುಖಂಡರ ಸಭೆಗಳಲ್ಲಿಯೂ ಬ್ಯಾಂಕ್ ಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ಕನ್ನಡ ಭಾಷೆ ತಿಳಿಯದ ಅಧಿಕಾರಿಗಳಿಗೆ ಜಿಲ್ಲಾಡಳಿತವು ಶಿಕ್ಷಣ ಇಲಾಖೆ ಹಾಗೂ ಲೀಡ್ ಬ್ಯಾಂಕ್ ಸಹಕಾರದೊಂದಿಗೆ ಕನ್ನಡ ಕಲಿಸುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ ಎಂದರು.

ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿದಾಗ ಗ್ರಾಹಕರು ಹಾಗೂ ಅಧಿಕಾರಿ ಸಿಬ್ಬಂದಿ ಮಧ್ಯೆ ಗೊಂದಲಗಳು ಏರ್ಪಡುವುದು ತಪ್ಪಲಿದೆ. ಕನ್ನಡ ಭಾಷೆಯನ್ನೇ ಬಳಸಿದಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ. ಸ್ಥಳೀಯ ಗ್ರಾಹಕರು ಪೂರ್ಣಪ್ರಮಾಣದಲ್ಲಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.ಕನ್ನಡ ಬಾರದಿರುವವರಿಗೆ ಕನ್ನಡ ಕಲಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುವುದು. ಸರಳವಾಗಿ ಸಂಭಾಷಿಸಲು ಸೂಕ್ತ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ. ಕಾರ್ಯನಿರ್ವಹಣೆಯಲ್ಲಿ ಸುಗಮ ಹಾಗೂ ದಕ್ಷತೆಗೆ ಪೂರಕವಾಗಿರುವ ಎಲ್ಲ ನೆರವು ಸಹಕಾರವನ್ನು ಜಿಲ್ಲಾಡಳಿತ ಒದಗಿಸಲು ಸಿದ್ದವಿದೆ. ಕಲಿಕಾ ತರಬೇತಿ ಶಿಬಿರದ ಪ್ರಯೋಜನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಖಾ, ಶಾಲಾ ಶಿಕ್ಷಣ ಇಲಾಖೆ ಉನಿರ್ದೇಶಕ ಚಂದ್ರಕಾಂತ್ ಪಾಟೀಲ್, ಜಿಲ್ಲಾ ಸಮಾಲೋಚಕ ಮಧುಕೇಶ್ ಇದ್ದರು.