ಬಳ್ಳಾರಿ: ಮಾತೃ ಭಾಷೆಯಲ್ಲಿ ಮಾತ್ರ ಭಾವನಾತ್ಮಕ ಸೂಕ್ಷ್ಮ ಸಂವೇದನೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯ ಎಂದು ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ರಾಜಶೇಖರ ಎಸ್. ಗಾಣಿಗೇರ ತಿಳಿಸಿದರು.ಜಿಲ್ಲಾ ಕಸಾಪ ನಗರದ ಶ್ರೀಗುರು ತಿಪ್ಪೇರುದ್ರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಿ.ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಸ್ಮಾರಕ ದತ್ತಿ ಹಾಗೂ ದಿ. ಕುಪ್ಪಗಲ್ಲು ನಾಗಪ್ಪ ಅವರ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಮನಸ್ಸಿನ ಭಾವನೆಗಳು, ಅನುಭವಗಳು ಮತ್ತು ಸಂವೇದನೆಗಳು ಅತ್ಯಂತ ಸೂಕ್ಷ್ಮವಾಗಿವೆ. ಅವನ್ನು ಸ್ಪಷ್ಟವಾಗಿ ಮತ್ತು ನೈಸರ್ಗಿಕವಾಗಿ ವ್ಯಕ್ತಪಡಿಸಲು ಭಾಷೆ ಪ್ರಮುಖ ಸಾಧನವಾಗಿದೆ. ಆದರೆ ಎಲ್ಲ ಭಾಷೆಗಳಿಗಿಂತ ಮಾತೃಭಾಷೆ ಮನುಷ್ಯನಿಗೆ ಹೆಚ್ಚು ಹತ್ತಿರವಾಗಿರುವುದರಿಂದ ಅದರ ಮೂಲಕವೇ ಭಾವನಾತ್ಮಕ ಸೂಕ್ಷ್ಮ ಸಂವೇದನೆಗಳನ್ನು ಸಂಪೂರ್ಣವಾಗಿ ಅಭಿವ್ಯಕ್ತಿಸಲು ಸಾಧ್ಯವಾಗುತ್ತದೆ ಎಂದರು.ಸತ್ಯಂ ಶಿಕ್ಷಣ ಸಂಸ್ಥೆಯ ಹಿರಿಯ ಉಪನ್ಯಾಸಕ ಅಲಂಬಾಷಾ ದ.ರಾ. ಬೇಂದ್ರೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕನ್ನಡ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಜಾಗತೀಕರಣ ಸಂದರ್ಭದಲ್ಲಿ ಇಂಗ್ಲಿಷ್ ಸರ್ವವ್ಯಾಪಿಯಾಗಿರುವ ದಿನಮಾನಗಳಲ್ಲಿ ಮಾತೃ ಭಾಷೆಗಳ ಉಳಿವಿಗಾಗಿ ಶ್ರಮಿಸುವ ಅನಿವಾರ್ಯತೆ ಇದೆ. ಸಮರಸವೇ ಜೀವನ ಎಂದು ಸಾರಿದ ವರಕವಿ ಬೇಂದ್ರೆಯವರು ಇಡೀ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿದರೂ ಜೀವನ ಪ್ರೀತಿಯನ್ನು ತಮ್ಮ ಸಾಹಿತ್ಯದಲ್ಲಿ ಒಡಮೂಡಿಸಿದರು ಎಂದು ತಿಳಿಸಿದರು.
ಶ್ರೀಗುರು ತಿಪ್ಪೇರುದ್ರ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಎನ್.ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪವು ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪಸರಿಸುವ ಕಾರ್ಯವನ್ನು ಗಡಿನಾಡಿನಲ್ಲಿ ಸುವ್ಯವಸ್ಥಿತವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.ಪತ್ರಕರ್ತ ಎಂ.ಇ. ಜೋಷಿ ಮಾತನಾಡಿ, ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಜಿ.ಶಂಕರ್ ಗೌಡ , ದತ್ತಿ ದಾನಿಗಳ ಪುತ್ರರಾದ ಕುಪ್ಪಗಲ್ಲು ವೀರೇಶ್, ಕುಪ್ಪಗಲ್ಲು ಗಿರಿಜಾ, ಕರ್ನಾಟಕ ಯುವಕ ಸಂಘದ ಮುಂಡಾಸದ ಮಲ್ಲಿಕಾರ್ಜುನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸೌಮ್ಯಾ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್ ವಂದಿಸಿದರು.