ಕನ್ನಡಪ್ರಭ ವಾರ್ತೆ ಮಂಡ್ಯ

ತಾಯಿಯ ಹಾಲು ಮಗುವಿನ ಮೊದಲ ಮತ್ತು ಅತ್ಯುತ್ತಮ ಆಹಾರ. ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ. ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸುವುದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಸ್ತನ್ಯಪಾನವು ಮಗುವಿನ ಆರೋಗ್ಯ ರಕ್ಷಣೆಯ ಜೊತೆಗೆ ತಾಯಿಯ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿ. ತಾಯಿ-ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸುವುದರೊಂದಿಗೆ ಕೆಲವು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂದರು.

ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 14,464 ಹೆರಿಗೆಗಳು ನಡೆದಿದ್ದು, ಎಲ್ಲವೂ ಸಾಂಸ್ಥಿಕ ಹೆರಿಗೆಗಳಾಗಿವೆ. ಈ ಪೈಕಿ 14,438 ಸಜೀವ ಜನನಗಳು ದಾಖಲಾಗಿದ್ದು, ಜನಿಸಿದ ಎಲ್ಲ ಶಿಶುಗಳಿಗೆ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲುಣಿಸುವ ಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.


ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಸಿ.ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸಿ.ಗೀತಾಲಕ್ಷ್ಮಿ ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ.ಎನ್.ಆಶಾಲತಾ ಉಪಸ್ಥಿತರಿದ್ದರು.