ಸಾರಾಂಶ
ಹೂಗಳಿಂದ ತೋಟಗಾರಿಕೆ ಇಲಾಖೆ ಕಚೇರಿ ಸಿಂಗಾರ । ಮಯೂರವರ್ಮ, ಸ್ವಾವಲಂಬಿ ರೈತ, ವಿವಿ ಸಾಗರ ಕಲಾಕೃತಿ ವಿಶೇಷ ಆಕರ್ಷಣೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹೆಣ್ಣಿಗೆ ಗೌರವ ಸೂಚಕ ಕಲಾಕೃತಿ, ಮಯೂರವರ್ಮ, ಸ್ವಾವಲಂಬಿ ರೈತ ಹಾಗೂ ವಾಣಿವಿಲಾಸ ಸಾಗರ ಕಲಾಕೃತಿ 32ನೇ ಫಲ-ಪುಷ್ಪ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು.ಫಲಪುಷ್ಪ ಪ್ರದರ್ಶನಕ್ಕೆ ಸಂಬಂದಿಸಿದಂತೆ ಗುರುವಾರ ಸುದ್ದಿದಗಾರರಿಗೆ ಮಾಹಿತಿ ನೀಡಿದ ಅವರು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ (ಬೋನ್ಸಾಯ್) ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಇರಲಿದೆ ಎಂದು ಹೇಳಿದರು.
ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ 50ಸಾವಿರ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಯಲಾಗಿದೆ. ಆರ್ಕಿಡ್ಸ್, ಕಾಕ್ಸ್ ಕೂಂಬ್, ಸೆಲೋಶಿಯಾ, ಗಾಕ್ಸೀನಿಯ, ಕೆಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ (ಡ್ವಾರ್ಫ್ ಮತ್ತು ಟಾಲ್) ಸಾಲ್ವಿಯಾ (ಕೆಂಪು, ನೀಲಿ, ಕೇಸರಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ (ಡ್ವಾರ್ಫ್ ಮತ್ತು ಟಾಲ್), ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡೋಲಾ, ಪಾಟ್ ಕ್ರೈಸಾಂತೆಮ್, ಪೆಂಟಾಸ್, ಯುಪೋರ್ಬಿಯ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿದೆ ಎಂದರು.ಹೆಣ್ಣಿನ ಮೇಲಿನ ಅತ್ಯಾಚಾರ, ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಪೋಕ್ಸೋ ಪ್ರಕರಣಗಳು ಗಮನದಲ್ಲಿಟ್ಟುಕೊಂಡು ಹೆಣ್ಣನ್ನು ಕೇವಲ ಹೆಣ್ಣಾಗಿ, ಅಬಲೆಯಾಗಿ ನೋಡದೆ, ಸಬಲೆಯಾಗಿ ನೋಡಲಿ ಎಂಬ ಮಹಾತ್ವಾಕಾಂಕ್ಷೆಯೊಂದಿಗೆ ಹಾಗೂ ಹೆಣ್ತನಕ್ಕೆ ಘಾಸಿಯಾಗದಂತೆ ಗೌರವಿಸೋಣ ಎಂಬ ಅರ್ಥದ ಕಲಾಕೃತಿ ಪ್ರದರ್ಶಿಸಲಾಗುವುದು ಎಂದರು.
ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ಕನ್ನಡದ ಮೊದಲ ದೊರೆ ಮಯೂರವರ್ಮ ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಅನೇಕರಿಗೆ ಈ ಮಾಹಿತಿ ತಿಳಿದಿಲ್ಲ. ಪಲ್ಲವರಿಂದ ಅವಮಾನಿತನಾದ ಮಯೂರವರ್ಮ ಹಿಂದಿರುಗಿ ಚಂದ್ರವಳ್ಳಿಯ ಘನ ಕಾಡಿನಲ್ಲಿ ಅಂದಿನ ಶ್ರೀ ಪರ್ವತ ಇಂದಿನ ದವಳಪ್ಪನಗುಡ್ಡ ಸುತ್ತ ಮುತ್ತ ಇಲ್ಲಿನ ಜನರನ್ನು ಒಳಗೊಂಡು ಶಸ್ತ್ರಭ್ಯಾಸ ಮಾಡಿ ಉನ್ನತ ಸೈನ್ಯ ಕಟ್ಟಿ ಪಲ್ಲವರೊಡನೆ ಕೆಚ್ಚದೆಯಿಂದ ಹೋರಾಡಿ ಅವರನ್ನು ಸೋಲಿಸಿ ಕನ್ನಡದ ಪ್ರಥಮ ಸಾಮ್ರಾಜ್ಯ ಚಂದ್ರವಳ್ಳಿಯಲ್ಲಿ ಸ್ಥಾಪನೆ ಮಾಡಿದ್ದಾನೆ. ಈ ಇತಿಹಾಸ ಹೇಳುವ ಮಯೂರವರ್ಮನ ಕಲಾಕೃತಿ, ಚಂದ್ರವಳ್ಳಿ ಕೆರೆ, ದವಳಪ್ಪನಗುಡ್ಡ ಹಾಗೂ ಕಲ್ಲಿನ ಮೇಲೆ ಇರುವ ಶಾಸನ ಪರಿಚಯಿಸುವಂತೆ ಪ್ರದರ್ಶನಗೊಳಿಸಲಾಗುವುದು ಎಂದು ಹೇಳಿದರು.ವಾಣಿವಿಲಾಸ ಸಾಗರ ಕರ್ನಾಟಕದ ಹಳೇಯ ಆಣಿಕಟ್ಟುಗಳಲ್ಲಿ ಒಂದಾಗಿದ್ದು 3ನೇ ಬಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದೆ. ತುಂಬಿದ ಡ್ಯಾಂ ಅನ್ನು ಸಂಭ್ರಮಿಸುವ ಸೂಚಕವಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟಿನ ಕಲಾಕೃತಿ ಪ್ರದರ್ಶಿಸಲಾಗುತ್ತಿದೆ ಎಂದು ಸವಿತಾ ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕೆ ಸಂಘದ ಸಲಹಾ ಸಮಿತಿ ಅಧ್ಯಕ್ಷ ಜಿ.ಎಸ್.ಉಜ್ಜಿನಪ್ಪ, ಖಜಾಂಚಿ ನಾಗರಾಜ್ ಬೇದ್ರೆ, ಕಾರ್ಯದರ್ಶಿ ಗಿರೀಶ್, ನಿರ್ದೇಶಕರಾದ ಶ್ವೇತಾ ವಿಶ್ವನಾಥ್, ಸತ್ಯನಾರಾಯಣ ನಾಯ್ಡು, ರೀನಾ ವೀರಭದ್ರಪ್ಪ, ಸುಮನಾ ತಿಮ್ಮಾರೆಡ್ಡಿ ಇದ್ದರು.