ಇಂದಿನಿಂದ ಫಲಪುಷ್ಪ ಪ್ರದರ್ಶನ

| Published : Jan 26 2024, 01:48 AM IST

ಸಾರಾಂಶ

ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಜ ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಕರ್ಷಕ ಫಲಪುಪ್ಪ ಪ್ರದರ್ಶನ ನಡೆಯಲಿದೆ. ಬೆಳಗ್ಗೆ ೧೧ ರಿಂದ ರಾತ್ರಿ ೯ ಗಂಟೆಯವರೆಗೂ ಇರಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಂಜೆಯ ವೇಳೆ ವಿದ್ಯುತ್ ದೀಪಾಲಂಕಾರ ಕಂಗೊಳಿಸಲಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಜ ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಕರ್ಷಕ ಫಲಪುಪ್ಪ ಪ್ರದರ್ಶನ ನಡೆಯಲಿದೆ. ಬೆಳಗ್ಗೆ ೧೧ ರಿಂದ ರಾತ್ರಿ ೯ ಗಂಟೆಯವರೆಗೂ ಇರಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಂಜೆಯ ವೇಳೆ ವಿದ್ಯುತ್ ದೀಪಾಲಂಕಾರ ಕಂಗೊಳಿಸಲಿದೆ. ಹೂವಿನಿಂದ ಮಾಡಿರುವ ಬೃಹತ್ ಹಣತೆಯೊಳಗೆ ಕರ್ನಾಟಕದ ಭೂಪಟ, ಆನೆ, ಫೋಟೊ ಶೂಟ್ (ಸೆಲ್ಫಿ ಪಾಯಿಂಟ್), ಸಿರಿಧಾನ್ಯದಿಂದ ಮೂಡಿದ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರಸ್ವಾಮಿ ಮತ್ತು ಬೆಟ್ಟದ ಹಿನ್ನೆಲೆ ಚಿತ್ರಣ, ಮರಳಿನಿಂದ ರಚಿಸಿದ ಪರಿಸರ-ದೈವ ಕಾಂತಾರ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ. ತರಕಾರಿ, ಹಣ್ಣುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರ ಚಿತ್ರಗಳ ಕೆತ್ತನೆ, ವರ್ಟಿಕಲ್ ಗಾರ್ಡನ್, ಇಕೆಬಾನ ಮಾದರಿಯ ಹೂ ಜೋಡಣೆ, ವಿವಿಧ ಹೂವಿನ ಗುಚ್ಚಗಳು, ಸಿರಿಧಾನ್ಯಗಳ ಕಲಾಕೃತಿ, ಅಲಂಕಾರಿಕ ಹೂವಿನ ಗಿಡಗಳು ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ. ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಜಾತಿಯ ಬಣ್ಣ ಬಣ್ಣದ ೧೨ ಸಾವಿರ ಹೂವಿನ ಗಿಡಗಳನ್ನು ಇಡಲಾಗುತ್ತಿದೆ. ಹನಿ ನೀರಾವರಿ ಪದ್ಧತಿ, ಕೃಷಿಹೊಂಡ-ನೀರು ಸಂರಕ್ಷಣೆ, ಗ್ರೀನ್‌ಹೌಸ್, ಹಣ್ಣು ಮಾಗಿಸುವ ಘಟಕ. ಜೇನುಕೃಷಿ, ತಾರಸಿ ತೋಟ, ನೆರಳು ಪರದೆ, ಜಲಾನಯನ ಅಭಿವೃದ್ಧಿ ಪ್ರದೇಶ ಮಾದರಿ, ಮೀನುಗಾರಿಕೆ ಬಯೋಫ್ಲಾಕ್ ಪದ್ಧತಿ ವಿವರಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ನೋಡಬಹುದು. ಅಣಬೆ ಬೇಸಾಯ, ಜೇನುಕೃಷಿ, ಸಮಗ್ರ, ಸಾವಯವ ಪದ್ಧತಿ-ಪರಿಕರಗಳು. ಜೈವಿಕ ಉತ್ಪನ್ನಗಳ ಕುರಿತು ಪ್ರಾತ್ಯಕ್ಷಿಕೆ ಸಹ ನೀಡಲಾಗುತ್ತದೆ. ಹಣ್ಣಿನ ಅಲಂಕಾರ ಗಿಡಗಳ ಮಾರಾಟ ಮಳಿಗೆ, ತಾಂತ್ರಿಕ ಸಲಹಾ ಕೇಂದ್ರಗಳು ಇರಲಿವೆ.

ಸರ್ಕಾರದ ವಿವಿಧ ಯೋಜನೆ ಹಾಗೂ ತಾಂತ್ರಿಕತೆ ಕುರಿತು ಬಿಂಬಿಸುವ ೩೦ ಮಳಿಗೆಗಳನ್ನು ಪ್ರದರ್ಶನದಲ್ಲಿ ತೆರೆಯಲಾಗುತ್ತಿದೆ. ಕೃಷಿ, ಮೀನುಗಾರಿಕೆ, ಪಶುಪಾಲನೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ್ಯ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ, ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಪಿಟಿಸಿಎಲ್ ಸಂಸ್ಥೆಗಳು ತಮ್ಮ ಇಲಾಖೆಯ ಮಾಹಿತಿ ಕುರಿತ ಮಳಿಗೆಗಳನ್ನು ತೆರೆಯಲಿವೆ.

ರೈತರು, ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ ಕುರಿತು ಅರಿವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಫಲಪುಷ್ಪ ಪ್ರದರ್ಶನದ ಉದ್ದೇಶವಾಗಿದೆ. ಹೀಗಾಗಿ ನಗರದಲ್ಲಿ ಮೂರು ದಿನಗಳ ಕಾಲ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಜನತೆ ವೀಕ್ಷಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.