ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಗದಗ ಜಿಲ್ಲಾ ಎಲ್ಲ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಒಟ್ಟು 40ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಗದಗ: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಸಹಯೋಗದಲ್ಲಿ ಜಿಲ್ಲಾ ವಲಯ ಮಟ್ಟದ 2025- 26ನೇ ಸಾಲಿನ ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳನ್ನು ಡಿ. 15 ಮತ್ತು 16ರಂದು ನಡೆಯಲಿದೆ ಎಂದು ಸಂಸ್ಥೆಯ ಚೇರ್ಮನ್ ಆನಂದ್ ಪೋತ್ನಿಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಗದಗ ಜಿಲ್ಲಾ ಎಲ್ಲ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಒಟ್ಟು 40ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯಲ್ಲಿ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸಮೂಹ ಜನಪದ ಗೀತೆ, ಸಮೂಹ ಜನಪದ ನೃತ್ಯ, ಶಾಸ್ತ್ರಿಯ ನೃತ್ಯ, ಸಮೂಹ ಜನಪದ ವಾದ್ಯ ಮೇಳ, ಸಮೂಹ ಹಾಗೂ ವೈಯಕ್ತಿಕ ಪಾಶ್ಚಿಮಾತ್ಯ ವಾದ್ಯ- ಸಂಗೀತ ಸ್ಪರ್ಧೆ, ಸಮೂಹ ಏಕಾಂಕ ನಾಟಕ ಸ್ಪರ್ಧೆ, ಸಿದ್ಧ ಭಾಷಣ, ಚರ್ಚಾ ಸ್ಪರ್ಧೆ, ಕ್ವಿಜ್, ಸ್ಕಿಟ್, ಮೈಮ, ಮಿಮಿಕ್ರಿ, ಚಿತ್ರಕಲೆ, ಇನ್ಸ್ಟಾಲೇಶನ್, ಮೆಹೆಂದಿ ರಂಗೋಲಿ, ಫೋಟೋಗ್ರಫಿ ಇನ್ಸ್ಟಾಲೇಶನ್, ಆನ್ ದ ಸ್ಪಾಟ್ ಪೇಂಟಿಂಗ್, ಕೊಲಾಜ್ ಹೀಗೆ ಒಟ್ಟು 27 ಸ್ಪರ್ಧೆಗಳು ನಡೆಯಲಿವೆ. ಡಿ. 13ರ ಸಂಜೆ 5ರೊಳಗಾಗಿ ಸ್ಪರ್ಧೆಗೆ ಹೆಸರು ನೋಂದಾಯಿಸಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಎ.ಡಿ. ಗೋಡಕಿಂಡಿ ಮಾತನಾಡಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಆನಂದ ಪೋತ್ನಿಸ್ ವಹಿಸಲಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ, ಸರ್ಕಾರಿ ಮುಖ್ಯ ಸಚಿತಕ ಸಲೀಂ ಅಹ್ಮದ್, ಶಾಸಕ ಜಿ.ಎಸ್. ಪಾಟೀಲ, ವಿಧಾನಪರಿಷತ್‌ ಶಾಸಕ ಎಸ್‌.ವಿ. ಸಂಕನೂರ, ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ. ಎಸ್.ಕೆ. ಪವಾರ ಉಪಸ್ಥಿತರಿರುತ್ತಾರೆ ಎಂದರು.

ಪ್ರಾ. ಡಾ. ವಿ.ಟಿ. ನಾಯ್ಕರ ಮಾತನಾಡಿ, ಡಿ. 16ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಾ. ಪ್ರೊ. ಲಿಂಗರಾಜ ರಶ್ಮಿ, ಯುವಜನೋತ್ಸವದ ಮುಖ್ಯಸ್ಥ ಪ್ರೊ. ಬಿ.ಪಿ. ಜೈನರ, ಪ್ರಾಣೇಶ್ ಬೆಳ್ಳಟ್ಟಿ, ರವೀಶ್ ಇದ್ದರು.