ಸಂವಿಧಾನ ಪ್ರಸ್ತಾವನೆ ಓದು- ಹೊಸ ಸರ್ಕಾರ ಸಂವಿಧಾನಬದ್ಧವಾಗಿ ನಡೆಯಬೇಕೆಂಬ ಹಕ್ಕೊತ್ತಾಯ

| Published : Jun 10 2024, 12:31 AM IST

ಸಂವಿಧಾನ ಪ್ರಸ್ತಾವನೆ ಓದು- ಹೊಸ ಸರ್ಕಾರ ಸಂವಿಧಾನಬದ್ಧವಾಗಿ ನಡೆಯಬೇಕೆಂಬ ಹಕ್ಕೊತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

2024ರ ಲೋಕಸಭಾ ಚುನಾವಣೆಯ ಫಲಿತಾಂಶ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ತೂಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನ ಪ್ರಸ್ತಾವನೆ ಓದು ಕಾರ್ಯಕ್ರಮ ಮೂಲಕ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಹೊಸ ಸರ್ಕಾರ ಸಂವಿಧಾನಬದ್ಧವಾಗಿ ನಡೆಯಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸಿದರು.

ನಗರದ ಗಾಂಧಿ ಚೌಕದಲ್ಲಿ ಭಾನುವಾರ ನಡೆದ ಸಂವಿಧಾನ ಪ್ರಸ್ತಾವನೆ ಓದು ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಮಾತನಾಡಿ, 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ತೂಗಿದೆ. ಒಂದು ದೇಶದ ಒಂದು ನಾಯಕ ಅನ್ನುವುದಕ್ಕೆ ಸೋಲಾಗಿದೆ. ಯಾವ ನಾಯಕ ಸಂವಿಧಾನಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಸಮೀಕ್ಷೆ ಮಕಾಡೆ ಮಲಗಿತು. ದೇಶದ ಪ್ರಬಲ ವಿರೋಧ ಪಕ್ಷ ಬಂದಿದೆ. ದೇಶದ ಮನಸ್ಥಿತಿ ಅಳೆಯಲು ಮುಂದಾದ ದಲ್ಲಾಳಿಗಳಿಗೆ ಸೋಲಾಗಿದೆ ಎಂದು ತಿಳಿಸಿದರು.

ಬೆಂಗಳೂರು, ದೆಹಲಿ ಮಹಾನಗರಗಳ ಜನರು ಕಪಟಿಗರು. ಬಡತನದ ಕೆಳಗಿನ ಜನರಿಗೆ ಉಚಿತ ಯೋಜನೆಗಳನ್ನು ಕೊಡಬೇಕು. ಈಗಾಗಲೇ ದೆಹಲಿಯಲ್ಲಿ ಉಚಿತ ವಿದ್ಯುತ್‌ ಕಡಿತ ಮಾಡಲಾಗಿದೆ. ಅಂತೆಯೇ ಕರ್ನಾಟಕದಲ್ಲಿ ಆಲೋಚಿಸಬೇಕು ಎಂದರು.

ಕರ್ನಾಟಕದಲ್ಲಿ 2 ಫ್ಯೂಡಲ್‌ ಜಾತಿ ಗಳು ಒಂದಾಗಿ ಸೋಲಾಯಿತು. ಎಲ್ಲದಕ್ಕೂ ಕರ್ನಾಟಕದ ಮಾದರಿ ಕಡೆ ನೋಡುತ್ತಿದ್ದರು. ಈಗ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರದ ಜನರಿಂದ ಕಲಿಯಬೇಕಾಗಿದೆ. ಈ ಲೋಕಸಭೆಯ ಫಲಿತಾಂಶದ ಜನತಂತ್ರದ ಕಥನ ಎಂದು ಅವರು ಹೇಳಿದರು.

ನಿವೃತ್ತ ಮೇಜರ್‌ ಜನರಲ್‌ ಎಸ್.ಜಿ. ಒಂಬತ್ಕೆರೆ ಮಾತನಾಡಿ, 2024 ಜನರ ವಿಜಯ ಪ್ರಜಾಪ್ರಭುತ್ವದ ವಿಜಯ, ಹೊಸ ಸರ್ಕಾರಕ್ಕೆ ಮೂರು ಮುಖ್ಯ ಬೇಡಿಕೆಗಳನ್ನು ಇಡುತ್ತಿದ್ದೇವೆ. 18ನೇ ಪಾರ್ಲಿಮೆಂಟ್‌ ಪೂರ್ತಿ ಸಂವಿಧಾನ ಮತ್ತು ಜನರ ಸಾರ್ವಭೌಮತೆ ಎತ್ತಿ ಹಿಡಿಯಬೇಕು. ಉದ್ಯಮಗಳ ದನಿ ಕೇಳದೇ ಜನರ ಕೇಳಿಸಬೇಕು. ಪ್ರಗತಿ ಮತ್ತು ಅಭಿವೃದ್ಧಿ ಜನ ಕೆಂದ್ರಿತವಾಗಿರಬೇಕು ಎಂದು ಒತ್ತಾಯಿಸಿದರು.

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‌ ಮಾತನಾಡಿ, 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಿರುದ್ಯೋಗ, ಮೋದಿ ಭಾಷಣ ಸೇರಿ 150 ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಆದರೆ, ನಿಜವಾದ ಕಾರಣ ಭಾರತದ ಸಂವಿಧಾನ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರಗಳ ಜನರು ಸಂವಿಧಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದನ್ನು ನಿರೂಪಿಸಿದರು ಎಂದರು.

ಒಕ್ಕೂಟದ ಇ. ರತಿರಾವ್‌, ಸ್ವರ್ಣಮಾಲಾ, ಲ. ಜಗನ್ನಾಥ್‌‍, ಜಗದೀಶ್‌ ಸೂರ್ಯ, ಆರ್‌.ಜಿ. ಬಂಡಾರಿ, ಸಿದ್ದರಾಜು, ಪ್ರೊ.ಪಿ.ಎನ್. ಶ್ರೀದೇವಿ, ಸುಶೀಲಾ, ಪ್ರೊ. ಪಂಡಿತಾರಾದ್ಯ, ನಾ. ದಿವಾಕರ್‌, ಸವಿತಾ ಮಲ್ಲೇಶ್‌, ಕೆ.ಆರ್‌. ಗೋಪಾಲಕೃಷ್ಣ, ಸಿ.ಎಂ. ನರಸಿಂಹಮೂರ್ತಿ, ಪ್ರವೀಣ, ಯತೀಶ್‌, ಚೇತನ್‌, ಹರೀಶ್‌ ಕುಮಾರ್‌, ನಾಗರಾಜ್‌‍, ಪಿ. ವಿಜಯ್‌ ಕುಮಾರ್‌ ಮೊದಲಾದವರು ಇದ್ದರು.