ಸಂಘ-ಸಂಸ್ಥೆಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿ: ಅಶೋಕ ಸಲಹೆ

| Published : Jun 10 2024, 12:31 AM IST

ಸಂಘ-ಸಂಸ್ಥೆಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿ: ಅಶೋಕ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿ ಮದಕರಿಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ವಿಶ್ವ ಪರಿಸರ ದಿನದ ಕಾರ್ಯಕ್ರಮವನ್ನು ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಅಶೋಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರೇತರ ಸಂಘ, ಸಂಸ್ಥೆಗಳೂ ಕೂಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಗಿಡಮರಗಳ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಚಿತ್ರದುರ್ಗ ತಾಲೂಕು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಅಶೋಕ ತಿಳಿಸಿದರು.

ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿ ಮದಕರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿ, ಶಾಲೆಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.

ಮದಕರಿಪುರ ಗ್ರಾಪಂ ಪಿಡಿಒ ನಾಗರಾಜು ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಹತ್ತು ಹಲವು ವಿನೂತನ ಯೋಜನೆ ಜಾರಿಗೆ ತಂದಿದೆ. ಸರ್ಕಾರದ ನಿರ್ದೇಶನದಂತೆ ಶಾಲೆ ಮಕ್ಕಳಿಗೆ ಸ್ಥಳೀಯ ಆಡಳಿತ ಮೂಲ ಸೌಕರ್ಯ ಒದಗಿಸಿಕೊಡಲು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಯೋಜನೆ ರೂಪಿಸಿ ಶಾಲೆ ಕುಂದು ಕೊರತೆ ನೀಗಿಸಲಾಗುವುದು ಎಂದರು.

ಮದಕರಿಪುರ ಸಮೂಹ ಸಂಪನ್ಮೂಲ ಕೇಂದ್ರದ ಸಿಆರ್‌ಪಿ ಎಂ.ಶಿವರುದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಶಾಲಾ ಮಕ್ಕಳಿಗೆ ಗಿಡ ಮರ ಸಂರಕ್ಷಿಸುವ ಮನೋಭಾವ ರೂಢಿಸಿ, ಹೆಚ್ಚೆಚ್ಚು ಸಸಿ ನೆಟ್ಟು ಪೋಷಿಸುವಂತೆ ಶಿಕ್ಷಕರು ಮತ್ತು ಸಮುದಾಯದವರು ಪ್ರೇರೇಪಿಸಬೇಕು ಎಂದರು

ಶಾಲಾ ಮುಖ್ಯಶಿಕ್ಷಕಿ ವಿ.ರೇಖಾ ಮಾತನಾಡಿ, ಹಳ್ಳಿಗಾಡಿನ ಮಕ್ಕಳಿಗೆ ಗಿಡ ಮರಗಳೆಂದರೆ ಅತೀ ಪ್ರೀತಿ ಅವರಿಗೆ ಚಿಕ್ಕಂದಿನಲ್ಲೇ ಪರಿಸರ ಮಲಿನತೆ, ಸಂರಕ್ಷಣೆ ನಮ್ಮ ಸುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರರಗಳ ಪೋಷಣೆ ಮಾಡುವುದನ್ನು ಕಲಿಸಬೇಕಿದೆ ಎಂದರು

ಇದೇ ವೇಳೆ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಕುರಿತು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮ ಕೈಗೊಂಡರು. ಈ ವೇಳೆ ಶಾಲಾ ಸಮಿತಿ ಅಧ್ಯಕ್ಷ ವಿಶ್ವನಾಥ್‌ರೆಡ್ಡಿ, ನಿವೃತ್ತ ಶಿಕ್ಷಕ ದಾಸೇಗೌಡ, ಶಾಲಾ ಸಿಬ್ಬಂದಿ, ಧರ್ಮಸ್ಥಳ ಸಂಸ್ಥೆ ವಿವಿಧ ಸಂಘಗಳ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.