ಗಾಂಧಿನಗರ ಚರ್ಮದ ಮಂಡಿ ಜಾಗ ಮುಸ್ಲಿಂ ಸಮುದಾಯ ಕೇಳಿಲ್ಲ

| Published : Nov 15 2024, 12:40 AM IST

ಸಾರಾಂಶ

Gandhinagar leather mandi land has not been requested by the Muslim community

-ಅನಗತ್ಯ ವಿವಾದ ಬೇಡ, ಸೌಹಾರ್ಧತೆ, ವಿಶ್ವಾಸದ ಜೀವನ ನಮ್ಮ ಗುರಿ: ಸೈಯದ್

------

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗಾಂಧಿನಗರದಲ್ಲಿರುವ ಚರ್ಮದ ಮಂಡಿ ಜಾಗವನ್ನು ಮುಸ್ಲಿಂ ಸಮುದಾಯ ವಕ್ಫ್ ಬೋರ್ಡ್‌ಗೆ ಸೇರ್ಪಡೆ ಮಾಡಬೇಕೆಂದು ನಗರಸಭೆಗೆ ಲಿಖಿತ ಮೂಲಕ ಅರ್ಜಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳ ವರದಿ ಹಿನ್ನೆಲೆ ನಗರದ ಮುಸ್ಲಿಂ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದರು.

ನಗರದ ಅಜ್ಜಯ್ಯನಗುಡಿ ರಸ್ತೆಯಲ್ಲಿರುವ ಶಾದಿಮಹಲ್ ಕಾಂಪ್ಲೆಕ್ಸ್‌ ನಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಎಸ್.ಎಚ್.ಸೈಯದ್, ಮುತುವಲ್ಲಿ ಎಂ.ದಾದಾಪೀರ್, ಜಾಮೀಯ ಮಸೀದಿ ಕೇರ್‌ಟೇಕರ್ ಸಿ.ಆರ್. ಅಲ್ಲಾಬಕ್ಷ್‌, ನಗರಸಭೆ ನಾಮಿನಿ ಸದಸ್ಯ ಅನ್ವರ್‌ ಮಾಸ್ಟರ್, ಎಸ್.ಪಿ.ಜುಬೇರ್, ಖಲೀಂವುಲ್ಲಾ, ರಫೀ, ನೂರುಲ್ಲಾ, ಅಬ್ದುಲ್ ರಶೀದ್ ಸ್ವಷ್ಟನೆ ನೀಡಿ, ನಗರಸಭೆಗೆ ಹಿಂದಿನ ಕೇರ್‌ಟೇಕರ್ ರಹಮ್ಮತ್‌ವುಲ್ಲಾ ಹೆಸರಿನಲ್ಲಿ ನೀಡಿದ ಮಾಹಿತಿ ನಕಲಿಯದಾಗಿದೆ.

ಆದ್ದರಿಂದ, ಈ ಬಗ್ಗೆ ಅನಗತ್ಯ ಸಮಸ್ಯೆ ಹುಟ್ಟಿಕೊಂಡಿದ್ದು, ಮುಸ್ಲಿಂ ಸಮುದಾಯ, ಬೆಂಗಳೂರು ರಸ್ತೆಯ ಕಬರ್‌ ಸ್ಥಾನಕ್ಕೆ ಹೊಂದಿಕೊಂಡಿರುವ ಕುಲುಮೆ ಪ್ರದೇಶವನ್ನು ಮಾತ್ರ ನೀಡುವಂತೆ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಬೇರೆ ಸಮುದಾಯಕ್ಕೆ ಸೇರಿದ ಸ್ವತ್ತನ್ನು ಪಡೆಯುವ ಉದ್ದೇಶ ಮುಸ್ಲಿಂ ಸಮುದಾಯಕ್ಕೆ ಇಲ್ಲ. ಇತ್ತೀಚೆಗೆ ನಗರಸಭೆ ಮುಂಭಾಗ ಮಾದಿಗ ಸಮುದಾಯ ನಡೆಸಿದ ಪ್ರತಿಭಟನೆ ವೇಳೆ ಸಂಸದ ಗೋವಿಂದ ಕಾರಜೋಳ, ಶಾಸಕ ಟಿ.ರಘುಮೂರ್ತಿ ಸಮಸ್ಯೆಯನ್ನು ಸೌಹಾರ್ಧಯುತವಾಗಿ ದಾಖಲಾತಿ ಆಧಾರದ ಮೇಲೆ ಪರಿಶೀಲಿಸುವಂತೆ ಸೂಚಿಸಿದ್ದನ್ನು ಸಮುದಾಯ ಸ್ವಾಗತಿಸುತ್ತದೆ ಎಂದಿದ್ದಾರೆ.

ಸಾರ್ವಜನಿಕವಾಗಿ ಮುಸ್ಲಿಂ ಸಮುದಾಯ ಮುಂದಿನ ದಿನಗಳಲ್ಲೂ ತನ್ನದೇ ಆದ ಮೌಲ್ಯಾಧಾರಿತ ಬದುಕು ನಡೆಸಲು ಇಚ್ಚಿಸುತ್ತದೆ. ಯಾವ ಸಮುದಾಯದವರನ್ನು ನೋಯಿಸಲು ಇಷ್ಟಪಡುವುದಿಲ್ಲ. ಎಲ್ಲರೊಂದಿಗೆ ಸೌಹಾರ್ಧತೆಯೊಂದಿಗೆ ಬದುಕುವುದೇ ನಮ್ಮ ಉದ್ದೇಶ ಎಂದಿದ್ದಾರೆ.

-----

ಪೋಟೋ: ಚಳ್ಳಕೆರೆ ನಗರದ ಅಜ್ಜಯ್ಯನಗುಡಿ ರಸ್ತೆಯಲ್ಲಿರುವ ಶಾದಿಮಹಲ್ ಕಾಂಪ್ಲೆಕ್ಸ್‌ ನಲ್ಲಿ ಮುಸ್ಲಿಂ ಸಮುದಾಯದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡ ಎಸ್.ಎಚ್.ಸೈಯದ್ ಮಾತನಾಡಿದರು.

೧೪ಸಿಎಲ್‌ಕೆ೨