ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಪ್ರತಿ ವರ್ಷದ ಮಕರ ಸಂಕ್ರಮಣದಂದು ಶ್ರೀಗಂಗಾಧರೇಶ್ವರಸ್ವಾಮಿ ಮತ್ತು ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ (ಗಂಗಪ್ಪನಧಾರೆ)ದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿ ಭಕ್ತಿಯ ಸಮರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಡುವಂತೆ ಪ್ರಾರ್ಥಿಸಿದರು.

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಪ್ರತಿ ವರ್ಷದ ಮಕರ ಸಂಕ್ರಮಣದಂದು ಶ್ರೀಗಂಗಾಧರೇಶ್ವರಸ್ವಾಮಿ ಮತ್ತು ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ (ಗಂಗಪ್ಪನಧಾರೆ)ದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿ ಭಕ್ತಿಯ ಸಮರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಡುವಂತೆ ಪ್ರಾರ್ಥಿಸಿದರು.

ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಪಂಚಾಮೃತ, ತುಪ್ಪ, ರುದ್ರ, ಮೃತ್ಯುಂಜಯ ಅಭಿಷೇಕಗಳನ್ನು ಮಾಡಿ ನಂತರ ಹೊನ್ನಾದೇವಿಯವರಿಗೆ ಅರಿಶಿನ-ಕುಂಕುಮ ಸೇವೆ, ತ್ರಿಶಕ್ತಿ ಸೇವೆ, ನವರಣ ಅರ್ಚನೆ, ಚಂಡಿಕಾ ಹೋಮ ಮುಖಾಂತರ ದೇವರ ರೂಪ ಸಿಂಗರಿಸಿ ಅಭಿಷೇಕ ಮಾಡಲಾಯಿತು.

ದಕ್ಷಿಣಕಾಶಿ ಶಿವಗಂಗೆಯ ಪುಣ್ಯಕ್ಷೇತ್ರದಲ್ಲಿ ಜ.15ರಂದು ಮಂಗಳವಾರ ಮಧ್ಯಾಹ್ನ 12.52 ಗಂಟೆಗೆ ಕಕುದ್ಗಿರಿ ಶಿಖರದಲ್ಲಿ ಗಂಗೋತ್ಪತ್ತಿಯಾಗಿದ್ದು, ಮಂಗಳವಾದ್ಯಗಳೊಂದಿಗೆ ಅರ್ಚಕರು ನಂದಿ ಗಂಗೆಯನ್ನು ಭಕ್ತಿ ಭಾವದಿಂದ ಶಾಸ್ತ್ರೋಕ್ತವಾಗಿ ಮಧ್ಯಾಹ್ನ 2 ಗಂಟೆಯಿಂದ 2.30 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶಿವ ಮತ್ತು ಗಿರಿಜಾ ಮಾತೆಗೆ ಧಾರೆಯೆರೆದು ವಿವಾಹ ಮಹೋತ್ಸವವನ್ನು ಸಂಪನ್ನಗೊಳಿಸಲಾಯಿತು.

ಅರ್ಚಕರಾದ ಸೋಮಸುಂದರ್ ರಾಜು ದೀಕ್ಷಿತ್‌ ಸಮ್ಮುಖದಲ್ಲಿ ಶೈವಾಗಮಿಕರಾದ ಡಾ. ಎಸ್.ಎನ್.ಸೋಮಸುಂದರ ದೀಕ್ಷಿತ್ ನಂತರ ಗಂಗಾಧರೇಶ್ವರನಿಗೆ ಪೂಜೆ ಸಲ್ಲಿಸಿ ವಿಶೇಷ ಅಭಿಷೇಕ, ಶತರುದ್ರಾಭಿಷೇಕ, ಮಂಗಳಾರತಿ ಮಾಡಲಾಯಿತು. , ಅರ್ಚಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ಡಿವೈಎಸ್ಪಿ ಜಗದೀಶ್, ಇನ್ಸ್‌ಪೆಕ್ಟರ್‌ಗಳಾದ ರಾಜು ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಶಿವಗಂಗೆ ಬೆಟ್ಟದಲ್ಲಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.

ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಮತ್ತು ದಾನಿಗಳ ಸಹಕಾರದಿಂದ, ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರಿಗೆ ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಹೆಸರುಬೇಳೆ, ಲಾಡು, ಪಲಾವ್, ಪಾಯಿಸ ಸೇರಿದಂತೆ ಬಮೂಲ್ ವತಿಯಿಂದ 20 ಸಾವಿರ ಮಜ್ಜಿಗೆ ಪ್ಯಾಕೇಟ್, ಸ್ಥಳೀಯ ಡೇರಿಗಳಿಂದ 150ಕ್ಕೂ ಲೀಟರ್ ಹಾಲು ವಿತರಣೆಯಾಯಿತು. ಶಾಸಕರು ವೈಯಕ್ತಿವಾಗಿ ದಾಸೋಹಕ್ಕೆ ನೂರು ಮೂಟೆ ಅಕ್ಕಿ, ಸಿಹಿ ವ್ಯವಸ್ಥೆ ಮಾಡಿದ್ದಾರೆಂದು ಟ್ರಸ್ಟ್‌ ಜಂಟಿ ಕಾರ್ಯದರ್ಶಿ ಹೊನ್ನಗಂಗಶೆಟ್ಟಿ ಹೇಳಿದರು.

ಗಿರಿಜಾಕಲ್ಯಾಣ ಮಹೋತ್ಸವ ಹಾಗು ಸಂಕ್ರಾಂತಿ ಹಬ್ಬದಂದು ಸಾವಿರಾರು ಭಕ್ತಾದಿಗಳು ಬರುವುದರಿಂದ ತುಮಕೂರು, ಬೆಂಗಳೂರು, ಮಾಗಡಿ, ರಾಮನಗರ ಭಾಗದಿಂದ ಬರಲು ಭಕ್ತಾದಿಗಳಿಗೆ ಬಸ್ ಸೌಲಭ್ಯ ಮಾಡಲಾಗಿತ್ತು. ಹಾಗೆಯೆ ದಾಬಸ್‍ಪೇಟೆ, ಮಾಗಡಿಯಿಂದ ಬರುವ ವಾಹನಗಳಿಗೆ ಶಿವಗಂಗೆ ಹಿಪ್ಪೆತೋಪಿನಲ್ಲಿ ನಿಲುಗಡೆ ಮಾಡಲು ಹಾಗು ಕುದೂರು ಹೊನ್ನೂಡಿಕೆಯಿಂದ ಬರುವ ವಾಹನಗಳಿಗೆ ಶಿವಾನಂದ ನಗರದ ಬಳಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಶೈವಾಗಮಿಕ ಡಾ. ಎಸ್.ಎನ್. ಸೋಮ ಸುಂದರ್‍ದೀಕ್ಷಿತ್, ಪ್ರಧಾನ ಅರ್ಚಕ ರಾಜು ದೀಕ್ಷಿತ್ ಮತ್ತು ತಂಡ ಹಾಗೂ ಶಾಸಕ ಎನ್.ಶ್ರೀನಿವಾಸ್, ಜಿಲ್ಲಾಧಿಕಾರಿ ಬಸವರಾಜು, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಡಿವೈಎಸ್ ಪಿ ಜಗದೀಶ್, ಮುಜುರಾಯಿ ತಹಸೀಲ್ದಾರ್ ಹೇಮಾವತಿ, ಇಒ ಬೃಂದಾ, ಉಪತಹಸೀಲ್ದಾರ್ ಶಶಿಧರ್, ಸ್ಥಳೀಯ ಮುಖಂಡರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ಜರುಗಿತು.

ದಾಸೋಹಕ್ಕೆ ಚಾಲನೆ :

ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಮತ್ತು ದಾನಿಗಳ ಸಹಕಾರದಿಂದ ಸುಮಾರು 60 ಸಾವಿರಕ್ಕೂ ಅಧಿಕ ಭಕ್ತರಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಎನ್. ಶ್ರೀನಿವಾಸ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು ಪ್ರಸಾದ ಬಡಿಸುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.

ಆರೋಗ್ಯ ತಪಾಸಣೆ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಶಿವಗಂಗೆ ಬೆಟ್ಟಕ್ಕೆ ಲಕ್ಷಾಂತರ ಜನರು ಆಗಮಿಸಿದ ಹಿನ್ನಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.

ಪೋಟೋ 1: ಶಿವಗಂಗೆಯ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಸೇರಿರುವ ಭಕ್ತ ಸಮೂಹ

ಪೋಟೋ 2 : ಗಂಗಪ್ಪನ ಧಾರೆಯಲ್ಲಿ ಗಂಗಾಧರೇಶ್ವರ ಮತ್ತು ಪಾರ್ವತಿ ಅಮ್ಮ.

ಪೋಟೋ 3 : ಅಲಂಕೃತಗೊಂಡ ಗಂಗಾಧರೇಶ್ವರ.

ಪೋಟೋ4 : ಪ್ರಸಾದ ನಿಲಯದಲ್ಲಿ ಭಕ್ತರು ಪ್ರಸಾದ ಸೇವಿಸುತ್ತಿರುವುದು.