ಕುಶಾಲನಗರ: ವಾಣಿಜ್ಯ ಬಳಕೆ ಅಡುಗೆ ಅನಿಲದ ತೀವ್ರ ಕೊರತೆಯಿಂದ ರಾಷ್ಟ್ರದ ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆ ತರುವ ಮೂಲಕ ರಾಷ್ಟ್ರದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಅಯೋಮಯಗೊಳಿಸಿದೆ ಎಂದು ಆರೋಪಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರು ರಸ್ತೆ ಮಧ್ಯೆ ಸೌದೆ ಬಳಸಿ ಒಲೆ ಉರಿಸಿ ಚಹಾ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಈ ಸಂದರ್ಭ ಮಾತನಾಡಿದ ವಿ.ಪಿ. ಶಶಿಧರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಭಾರತವನ್ನು ನಗೆಪಾಟಲಿಗೀಡು ಮಾಡುತ್ತಿದ್ದಾರೆ. ಭಾರತದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪುತ್ತಿದ್ದು, ಪ್ರಧಾನಿ ಮೋದಿ ಕೇವಲ ಪಂಚ ರಾಜ್ಯಗಳ ಚುನಾವಣೆಗೆ ಸಮಯ ಮೀಸಲಿರುವುದು ಖಂಡನೀಯ ಎಂದರು. ಅಡುಗೆ ಅನಿಲ ಬೆಲೆ ದಿಢೀರನೆ ಏರಿಕೆ ಮಾಡಿ ದೇಶದಾದ್ಯಂತ ಸಮಸ್ಯೆ ಸೃಷ್ಟಿಸಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ವಿದೇಶಾಂಗ ನೀತಿಯನ್ನು ವಿರೋಧಿಸಿ ಮತ್ತು ಅಡುಗೆ ಅನಿಲ ಕೊರತೆ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು.

ಈ ಸಂದರ್ಭ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದಿಂದ ನಾಮನಿರ್ದೇಶಿತ ನಾಯಕರು, ಮಹಿಳಾ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲವು ಸಮಯ ಮಾನವ ಸರಪಳಿ ರಚಿಸಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.