ಸೋಮರಡ್ಡಿ ಅಳವಂಡಿ ಕೊಪ್ಪಳ
ಹೋಟೆಲ್‌ನಲ್ಲಿ ಇನ್ನೆರಡು ದಿನಕ್ಕೆ ಆಗುವಷ್ಟು ಮಾತ್ರ ಸಿಲಿಂಡರ್ ಇದ್ದು, ಅದು ಮುಗಿಯುತ್ತಿದ್ದಂತೆ ಹೋಟೆಲ್ ಬಂದ್ ಮಾಡುವುದು ಅನಿವಾರ್ಯ. ಹೀಗಾಗಿ, ಹೋಟೆಲ್‌ನವರು ಎಲೆಕ್ಟ್ರಿಕ್ ಒಲೆ ಬಳಕೆ ಶುರು ಮಾಡಿದ್ದಾರೆ.ಹೌದು, ಕಳೆದ ಐದು ದಿನಗಳಿಂದ ಕೊಪ್ಪಳ ಜಿಲ್ಲೆಗೆ ಒಂದೇ ಒಂದು ವಾಣಿಜ್ಯ ಬಳಕೆ ಸಿಲಿಂಡರ್ ಬಂದಿಲ್ಲ. ಹೀಗಾಗಿ, ತೀವ್ರ ಸಮಸ್ಯೆ ಎದುರಾಗಿದ್ದು, ಹೋಟೆಲ್‌ನಲ್ಲಿ ದೋಸೆ ಹಾಕುವುದನ್ನು ಕಡಿಮೆ ಮಾಡಿ, ಇತರ ಸಾಮಾನ್ಯ ತಿಂಡಿ ಮಾತ್ರ ಮಾಡುತ್ತಿದ್ದಾರೆ.
ಈಗ ಇರುವ ಸಿಲಿಂಡರ್ ಎರಡು ದಿನಗಳ ಕಾಲ ಸಾಲಬಹುದು. ಅದಾದ ಮೇಲೆ ಹೋಟೆಲ್ ಬಂದ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುವುದು ಮಾತ್ರ ಗ್ಯಾರಂಟಿ.ಹೋಟೆಲ್ ಬಂದ್ ಮಾಡುವ ಬದಲು ಎಲೆಕ್ಟ್ರಿಕಲ್ ಒಲೆ ಬಳಕೆ ಮಾಡಲಾರಂಭಿಸಿದ್ದು, ಅದರಲ್ಲಿ ಬರಿ ಟಿ, ಕಾಫಿ ಮಾಡಿಕೊಡಬಹುದು ಎನ್ನುತ್ತಾರೆ ಕೊಪ್ಪಳ ಜಿಲ್ಲೆಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ ಅವರು.
ಹೋಟೆಲ್ ಬಂದ್ ಮಾಡಬಾರದು ಎನ್ನುವ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕಲ್ ಒಲೆ ಖರೀದಿ ಮಾಡಿ, ಅದರ ಮೇಲೆ ಟಿ, ಕಾಫಿ ಮಾಡುತ್ತಿದ್ದೇವೆ. ಟಿ, ಕಾಫಿ ಮಾಡುವುದಕ್ಕೂ ನಿರಂತರ ಸಿಲಿಂಡರ್ ಬಳಕೆ ಮಾಡುತ್ತಿದ್ದೇವು. ಈಗ ಅದರ ಬದಲಾಗಿ ಎಲೆಕ್ಟ್ರಿಕಲ್ ಒಲೆ ಬಳಕೆ ಮಾಡುತ್ತಿರುವುದರಿಂದ ಎರಡು ದಿನಕ್ಕೆ ಆಗುವಷ್ಟು ಸಿಲಿಂಡರ್ ಉಳಿಕೆಯಾಗಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಬಂದ್ ಮಾಡಬೇಕಾಗಿತ್ತು ಎನ್ನುತ್ತಾರೆ.
ನಾವೇನು ಮಾಡುವ ಸ್ಥಿತಿಯಲ್ಲಿ ಇಲ್ಲ, ಒಂದೇ ಒಂದು ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗಿಲ್ಲ. ಹೀಗಾಗಿ, ನಾವು ಎಲ್ಲಿಂದ ಕೊಡುವುದು ಎನ್ನುತ್ತಾರೆ. ಅಷ್ಟಕ್ಕೂ ವಾಣಿಜ್ಯ ಬಳಕೆಯ ಇದುವರೆಗೂ ಬಂದೇ ಇಲ್ಲ. ಹೀಗಾಗಿ, ಸಮಸ್ಯೆಯಾಗಿದೆ ಎನ್ನುತ್ತಾರೆ ಸಿಲಿಂಡರ್ ವಿತರಕರು.
ಬುಕ್ಕಿಂಗ್ ಸ್ವಿಚ್ ಆಫ್: ಕೊಪ್ಪಳ ಜಿಲ್ಲಾದ್ಯಂತ ಗ್ಯಾಸ್ ಬುಕ್ ಮಾಡಲು ಸಾರ್ವಜನಿಕರು ಹೆಣಗಾಡುತ್ತಿದ್ದಾರೆ. ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ. ಇದರಿಂದ ಬುಕ್ಕಿಂಗ್ ಮಾಡಲು ಪರದಾಡುತ್ತಿದ್ದಾರೆ. ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಆಗುತ್ತಿದ್ದಂತೆ ಅಡುಗೆ ಅನಿಲ ಸಿಗಲ್ಲ ಎಂದು ಆತಂಕಗೊಂಡ ಜನರು ಎಜೆನ್ಸಿಯ ಬಳಿಗೆ ಹೋಗಿದ್ದರಿಂದ ಕೊಪ್ಪಳ ನಗರದ ಗುರುಪ್ರಸಾದ ಎಜೆನ್ಸಿಯ ಎದುರು ದೊಡ್ಡ ಗಲಾಟೆಯೇ ಆಗುವಂತೆ ಆಯಿತು. ಕೊನೆಗೆ ಅವರೇ ಬುಕ್ಕಿಂಗ್ ಮಾಡುವ ಪ್ರಯತ್ನ ಮಾಡಿ, ಕೆಲವರಿಗೆ ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.ಡಬಲ್ ಬುಕ್ಕಿಂಗ್:ಸಿಲಿಂಡರ್ ಅಭಾವ ಎದುರಾಗುತ್ತದೆ ಎನ್ನುವ ಗುಮಾನಿ ಈಗ ಭಾರಿ ಸಮಸ್ಯೆಯಾಗುವುದಕ್ಕೆ ಕಾರಣವಾಗಿದೆ. ಬುಕ್ಕಿಂಗ್ ಮಾಡುವವರ ಸಂಖ್ಯೆ ದುಪ್ಪಟ್ಟು ಆಗಿದ್ದರಿಂದ ಸರ್ವರ್ ಹ್ಯಾಂಗ್ ಆಗುತ್ತಿದೆ. ಸರ್ವರ್ ಕೈಕೊಡುತ್ತಿದೆ. ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಕೊಪ್ಪಳ ನಗರದ ಗುರುಪ್ರಸಾದ ಎಜೆನ್ಸಿಯಲ್ಲಿ ನಿತ್ಯವೂ 500 ಬುಕ್ಕಿಂಗ್ ಮಾಡುತ್ತಿದ್ದವರು ಏಕಕಾಲದಲ್ಲಿ ಸಾವಿರಕ್ಕೂ ಅಧಿಕ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಹೀಗೆ ದೇಶದಾದ್ಯಂತ ಬುಕ್ಕಿಂಗ್ ದುಪ್ಪಟ್ಟಾಗಿದ್ದರಿಂದ ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿರುವುದು ಭಾರಿ ಆತಂಕವನ್ನುಂಟು ಮಾಡಿದೆ.
ಕೊಪ್ಪಳ ಜಿಲ್ಲೆಯಲ್ಲಿ 16 ಎಜೆನ್ಸಿಗಳು ಇದ್ದು, ಕೊಪ್ಪಳ ನಗರದಲ್ಲಿ ಮೂರು ಎಜೆನ್ಸಿಗಳು ಇವೆ. ಎಲ್ಲ ಎಜೆನ್ಸಿಯವರಿಗೆ ಗ್ರಾಹಕರ ಕರೆಗಳಿಂದ ಸಾಕು ಬೇಕಾಗಿ ಹೋಗಿದೆ.ಸ್ವಿಚ್ ಆಫ್:ಮನೆ ಮನೆಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ಡಿಲೆವರಿ ಬಾಯ್‌ಗಳ ನಂಬರ್ ಸಹ ಸ್ವಿಚ್ ಆಗಿದೆ. ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಆಗುತ್ತಿದ್ದಂತೆ ಡಿಲೆವರಿ ಬಾಯ್‌ಗಳಿಗೆ ಕರೆ ಮಾಡುವವರ ಸಂಖ್ಯೆ ಮಿತಿಮೀರಿದ್ದರಿಂದ ಸಾಕುಬೇಕಾಗಿ ಅನೇಕರು ಸ್ವಿಚ್ ಮಾಡಿದ್ದಾರೆ. ಬ್ಯಾಟರಿ ಚಾರ್ಜ್ ಖಾಲಿಯಾತ್ತಿರುವುದರಿಂದ ಸ್ವಿಚ್ ಆಗುತ್ತಿವೆ ಎಂದು ಡಿಲೇವರಿ ಬಾಯ್‌ಗಳು ಹೇಳುತ್ತಿದ್ದಾರೆ.
ಮನೆ ಬಳಕೆ ಸಿಲಿಂಡರ್ ಸಮಸ್ಯೆ ಇಲ್ಲ. ಆದರೆ, ಏಕಕಾಲದಲ್ಲಿ ಬುಕ್ಕಿಂಗ್ ದುಪ್ಪಟ್ಟು ಅಷ್ಟೇ ಅಲ್ಲ, ನಾಲ್ಕಾರು ಪಟ್ಟು ಆಗಿದ್ದರಿಂದ ಬುಕ್ಕಿಂಗ್ ಸರ್ವರ್ ಹ್ಯಾಕ್ ಆಗಿದೆ. ಹೀಗಾಗಿ, ಆತಂಕಗೊಂಡಿರುವ ಗ್ರಾಹಕರು ನಮ್ಮ ಎಜೆನ್ಸಿಯ ಬಳಿ ನೇರವಾಗಿ ಬಂದಿದ್ದರಿಂದ ಗದ್ದಲವಾಗುತ್ತಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಕಳೆದ ಐದು ದಿನಗಳಿಂದ ಒಂದು ಸಹ ಬಂದಿಲ್ಲ ಎಂದು ಕೊಪ್ಪಳದ ಗುರುಪ್ರಸಾದ ಎಜೆನ್ಸಿಯ ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.ನಮ್ಮ ಬಳಿ ಇರುವುದು ಇನ್ನೆರಡು ದಿನಗಳ ಕಾಲ ಮಾತ್ರ ಆಗುತ್ತದೆ. ಆನಂತರ ಬಂದ್ ಮಾಡಬೇಕಾಗುತ್ತದೆ ಎಂದು ಎಲೆಕ್ಟ್ರಿಕಲ್ ಒಲೆ ಬಳಕೆ ಮಾಡುತ್ತಿದ್ದೇವೆ. ಅದರ ಮೇಲೆ ಬರಿ, ಟಿ, ಕಾಫಿ ಮಾತ್ರ ಮಾಡಬಹುದು ಎಂದು ಕೊಪ್ಪಳ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ ತಿಳಿಸಿದ್ದಾರೆ.