ಸಾರಾಂಶ
ರೊಟ್ಟಿಕಟ್ಟೆಯಿಂದ ಎರಡು ರಸ್ತೆ ಬದಿಗಳು ಮದುವಣಗಿತ್ತಿ ರೂಪದಲ್ಲಿ ಅಲಂಕೃತಗೊಂಡು ಜನರನ್ನು ಜಲಪಾತೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸುತ್ತಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಜಲಪಾತೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿವಿಧ ಬಣ್ಣಗಳ ಚಿತ್ತಾರದೊಂದಿಗೆ ಸೆ.14 ಮತ್ತು 15 ರಂದು ನಡೆಯುವ ಜಲಪಾತೋತ್ಸವದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.ತಾಲೂಕಿನ ಶಿವನಸಮುದ್ರ ಗಗನಚುಕ್ಕಿ ಜಲಪಾತದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೊಟ್ಟಿಕಟ್ಟೆಯಿಂದ ಎರಡು ರಸ್ತೆ ಬದಿಗಳು ಮದುವಣಗಿತ್ತಿ ರೂಪದಲ್ಲಿ ಅಲಂಕೃತಗೊಂಡು ಜನರನ್ನು ಜಲಪಾತೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸುತ್ತಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಜಲಪಾತೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಾರ್ವಜನಿಕರು ಬಂದು ಹೋಗಲು ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್ ರೂಟ್ ಗಳ ವ್ಯವಸ್ಥೆ ಮಾಡಲಾಗಿದೆ. ರೊಟ್ಟಿಕಟ್ಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಗಳವರೆಗೆ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎರಡು ದಿನಗಳ ಜಲಪಾತೋತ್ಸವಕ್ಕೆ ವಿಶೇಷ ದೀಪಾಲಂಕಾರ ಹಾಗೂ ಲೇಜರ್ ಶೋ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಉಪಾಹಾರ ಹಾಗೂ ಊಟದ ವ್ಯವಸ್ಥೆ ಜೊತೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.ಗಗನಚುಕ್ಕಿ ಜಲಪಾತ ಸಮೀಪ ಐಲ್ಯಾಂಡ್ ಪ್ರದೇಶದಲ್ಲಿದ್ದು, ಇಲ್ಲಿ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಟನಲ್ ಅಕ್ವೇರಿಯಂ ಸೇರಿದಂತೆ ಜಲ ಕ್ರೀಡೆ ಸಹ ನಡೆಸಲು ಅವಕಾಶವಿದೆ. ಈ ಯೋಜನೆಗೆ ಅನುಮತಿ ನೀಡುವಂತೆ ಜಲಪಾತೋತ್ಸವದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಜಲಪಾತೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಸೆ.14 ರಂದು ಬೆಳಗ್ಗೆ 11 ಗಂಟೆಗೆ ಸಾಂಕೇತಿಕವಾಗಿ ಕಲಾತಂಡಗಳ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಗುವುದು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದರು.ಜಲಪಾತವನ್ನು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು, ಪ್ರವಾಸಿಗರು ವೀಕ್ಷಿಸಲು ದೊಡ್ಡದಾದ ಮೆಟ್ಟಿಲು ಹಾಗೂ ಆವರಣ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜಿನವರು ವಿಶೇಷ ಬೆಳದಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ನೀಡಲಾಗುವುದು ಎಂದರು.
ಈ ವೇಳೆ ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್, ಚೆಸ್ಕಾಂ ಎಂಜಿನಿಯರ್ ಪ್ರೇಮ್‌ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಚಿಕ್ಕಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಯಯ್ಯ, ಸಿ.ಪಿ ರಾಜು ಸೇರಿದಂತೆ ಇತರರು ಇದ್ದರು.