ಸಾರಾಂಶ
ಪೌಷ್ಟಿಕಾಂಶದ ತಿನಿಸು ಹಾಗೂ ಕುಡಿಯಲು ರಾಗಿಮಾಲ್ಟ್ ಕೊಡುವ ಯೋಜನೆ ಆರಂಭಿಸಿದ್ದಾರೆ. ಮಕ್ಕಳಿಗೆ ಸರ್ಕಾರ ಹಲವು ಸೌಲಭ್ಯಗಳ ಒದಗಿಸಿದ್ದು ಈ ಎಲ್ಲಾ ಸೌಲಭ್ಯಗಳ ಬಳಸಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಎಲ್ಲಾ ಮಕ್ಕಳಿಗೂ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣಾ ಕಾರ್ಯಕ್ರಮಕ್ಕೆ ಬಿಇಒ ನಂಜರಾಜ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ ಚಾಲನೆ ನೀಡಿದರು.ಟಿ.ಬಿ.ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ವಿತರಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಬಜೆಟ್‍ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು, ಈಗ ಪೌಷ್ಟಿಕಾಂಶದ ತಿನಿಸು ಹಾಗೂ ಕುಡಿಯಲು ರಾಗಿಮಾಲ್ಟ್ ಕೊಡುವ ಯೋಜನೆ ಆರಂಭಿಸಿದ್ದಾರೆ. ಮಕ್ಕಳಿಗೆ ಸರ್ಕಾರ ಹಲವು ಸೌಲಭ್ಯಗಳ ಒದಗಿಸಿದ್ದು ಈ ಎಲ್ಲಾ ಸೌಲಭ್ಯಗಳ ಬಳಸಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂದು ಹೇಳಿದರು.
ಬಿಇಒ ನಂಜರಾಜ್ ಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಗಿಮಾಲ್ಟ್ ನೀಡುವ ಬಗ್ಗೆ ಆದೇಶ ಹೊರಡಿಸಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದರು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ರಾಜ್ಯಕ್ಕೆ ವಿಸ್ತರಿಸಿ ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ಕೊಡುತ್ತಿದ್ದಾರೆ ಎಂದು ವಿವರಿಸಿದರು. ರಾಜ್ಯ ಸರ್ಕಾರ ಈ ವರೆಗೂ ಬಾಳೆಹಣ್ಣು, ಬಿಸಿಯೂಟ, ಮೊಟ್ಟೆ, ಚಿಕ್ಕಿ ಕೊಡುವ ಜೊತೆಗೆ ಈಗ ರಾಗಿ ಮಾಲ್ಟ್ ಕೊಡುತ್ತಿದೆ, ಈ ಎಲ್ಲಾ ಸೌಲಭ್ಯಗಳ ಬಳಸಿಕೊಂಡು ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಓದುವುದರಲ್ಲಿ ಮಗ್ನರಾಗಬೇಕು ಎಂದು ಹೇಳಿದರು.ಬಿ.ಆರ್.ಸಿ, ತಿಪ್ಪೇಶಪ್ಪ,ಇಸಿಒ ಮುದ್ದನಗೌಡ, ಶಾಲಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನವೀನ್,ಉಪಾಧ್ಯಕ್ಷೆ ರೇಷ್ಮಾ, ಅಬ್ಸರ್ ಅಹ್ಮದ್., ಸುನಿಲ್,ಅರುಣ್, ಮುಖ್ಯೋಪಾಧ್ಯಾಯ ಸುರೇಶ್, ಇತರರಿದ್ದರು.