ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಪೋಷಕರು ಇಂಗ್ಲಿಷ್ ಮೋಹದಿಂದ ಹೊರಬಂದು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಮಕ್ಕಳು ಉದ್ಧಾರವಾಗುತ್ತಾರೆ ಎಂಬ ಅಜ್ಞಾನದಿಂದ ಹೊರ ಬನ್ನಿ ಎಂದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಪೋಷಕರಿಗೆ ತಿಳಿಸಿದರು.ನಗರದ ರಾಘವ ಕಲಾಮಂದಿರದಲ್ಲಿ ವಿವೇಕ ತೋರಣ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದರ ಲೀಲಾಮೃತ ಉಪನ್ಯಾಸ ಮಾಲಿಕೆಯಲ್ಲಿ ಮಾತೃಭಾಷೆಯಲ್ಲಿ ಸಿಗುವ ಶಿಕ್ಷಣದಿಂದ ಮಗುವಿನ ಮೇಲಾಗುವ ಹಿತಕರ ಪರಿಣಾಮಗಳ ಕುರಿತು ತಿಳಿಸಿದರು.
ಗೊತ್ತಿಲ್ಲದ ಭಾಷೆಯಲ್ಲಿ ಮಗುವಿಗೆ ಪಾಠ ಮಾಡುವುದರಿಂದಾಗುವ ಪರಿಣಾಮಗಳ ಬಗ್ಗೆ ಪೋಷಕರು ಯೋಚನೆ ಮಾಡಿದ್ದೀರಾ? ಮಾತೃಭಾಷೆಯಿಂದ ಮಾತ್ರ ಮಗುವಿನ ಆಲೋಚನೆ ಹಾಗೂ ಚಿಂತನೆಗಳು ಪ್ರಖರಗೊಳ್ಳಲು ಸಾಧ್ಯ. ಇಂತಹ ಕನಿಷ್ಠ ತಿಳಿವಳಿಕೆಯಾದರೂ ಪೋಷಕರಿಗೆ ಇರಬೇಕು. ಭಾರತ ಹೊರತುಪಡಿಸಿದರೆ, ಜಗತ್ತಿನ ಯಾವುದೇ ದೇಶದಲ್ಲೂ ಗೊತ್ತಿಲ್ಲದ ಭಾಷೆಯಲ್ಲಿ ಮಕ್ಕಳಿಗೆ ಬೋಧನೆ ಮಾಡುವುದಿಲ್ಲ. ಜಪಾನ್ ವಿವಿಗಳ ಪ್ರಾಧ್ಯಾಕರಿಗೆ ಇಂಗ್ಲೀಷೇ ಬರುವುದಿಲ್ಲ. ಜಪಾನ್‌ನಷ್ಟು ನಾವೇನು ಮುಂದುವರಿದಿದ್ದೇವೆಯೇ? ಇಡೀ ವಿಶ್ವದಲ್ಲಿ ಎಂಟು ದೇಶಗಳಲ್ಲಿ ಮಾತ್ರ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ನಡೆಯುತ್ತದೆ. ಆ ದೇಶಗಳ ಮಾತೃಭಾಷೆ ಸಹ ಇಂಗ್ಲಿಷ್ ಆಗಿದೆ. ಇಂತಹ ಸಣ್ಣಸಣ್ಣ ಸಂಗತಿಗಳು ಸಹ ಪೋಷಕರು ತಿಳಿಯದೇ ಇಂಗ್ಲಿಷ್ ಮೊರೆ ಹೋಗುವ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಾಮಿ ವಿವೇಕಾನಂದರು ಅಮೆರಿಕವೇ ಅಚ್ಚರಿಗೊಳ್ಳುವಂತೆ ಇಂಗ್ಲಿಷ್‌ನಲ್ಲಿ ಉಪನ್ಯಾಸ ನೀಡುತ್ತಾರೆ. ಹಾಗಂತ ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿರಲಿಲ್ಲ. ವಿವೇಕಾನಂದರು ಮಾತೃಭಾಷೆ ಬಂಗಾಳಿಯಲ್ಲಿಯೇ ಶಿಕ್ಷಣ ಪಡೆದರು. ಅವರ ಆಸಕ್ತಿಯಂತೆ ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳನ್ನು ಕಲಿತರು. ಜನರಾಡುವ ಭಾಷೆಯಲ್ಲಿಯೇ ಶಿಕ್ಷಣ ದೊರೆಯಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಭಗವಾನ್ ಬುದ್ಧರು ಜನಾಡುವ ಭಾಷೆಯಲ್ಲಿ ಶಿಕ್ಷಣ ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಮಾತೃಭಾಷೆಯ ಮಹತ್ವ ಅರಿಯದೆ ವಿದೇಶಿ ಭಾಷೆಗೆ ಮೋಹಗೊಳ್ಳುವುದು ಸರಿಯಲ್ಲ ಎಂದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು, ಕನಿಷ್ಠ 7ನೇ ತರಗತಿವರೆಗಾದರೂ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಪೋಷಕರಿಗಿರಬೇಕು ಎಂದರು.
ಮಕ್ಕಳ ಮೇಲೆ ಪ್ರಭಾವ ಬೀರುವವರು:ಅಕ್ರಮ ಹಾದಿ ಹಿಡಿದು ಹಣವಂತರಾದವರು ಹಾಗೂ ಅಧಿಕಾರ ಹಿಡಿದವರು ಮಕ್ಕಳ ಮೇಲೆ ಪ್ರಭಾವ ಬೀರಬಾರದಂತೆ ಶಿಕ್ಷಕರಾದವರು ನೋಡಿಕೊಳ್ಳಬೇಕು. ತರಗತಿ ಕೋಣೆಯಲ್ಲಿ ಮಹಾತ್ಮರ ಸಂಗತಿಗಳನ್ನು ತಿಳಿಸಿಕೊಡಬೇಕು.
ಶ್ರೀರಾಮಕೃಷ್ಣರು, ಭಗವಾನ್ ಬುದ್ಧರ ತಪಸ್ಸಿನ ಶಕ್ತಿ, ವಿವೇಕಾನಂದರ ರಾಷ್ಟ್ರಪ್ರೇಮ, ಸಾವು ಬಂದರೂ ಜಗ್ಗದ ಹರಿಶ್ಚಂದ್ರನ ಸತ್ಯ ಪ್ರತಿಪಾದನೆ, ಶ್ರೀರಾಮಚಂದ್ರನ ಸಹೋದರ ಪ್ರೀತಿಗಳ ಕುರಿತು ಮಕ್ಕಳಿಗೆ ತಿಳಿಸಿಕೊಡಬೇಕು. ಮಹಾತ್ಮರು ಮಾತ್ರ ಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರಲು ಸಾಧ್ಯವಿದ್ದು, ಶಿಕ್ಷನಾದವನು ತರಗತಿ ಕೋಣೆಯಲ್ಲಿ ಬಹಳ ಜಾಣ್ಮೆಯಿಂದ ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ವಿಚಾರಗಳನ್ನು ತಿಳಿಸುತ್ತಾ ಇರಬೇಕು ಎಂದರು.ಇದೇ ವೇಳೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ನಿರ್ಭಯಾನಂದ ಸರಸ್ವತಿ ಸ್ವಾಮಿ, ಬೇರೆ ಮಠ ಮಾನ್ಯಗಳಲ್ಲಿನ ಜಾತಿ, ವರ್ಣ ವ್ಯವಸ್ಥೆ, ಸಹ ಪಂಕ್ತಿ ಭೋಜನೆಯ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀರಾಮಕೃಷ್ಣ ಮಠಗಳಲ್ಲಿ ಜಾತಿ, ಧರ್ಮ, ವರ್ಣ ವ್ಯವಸ್ಥೆ ಇಲ್ಲ. ಎಲ್ಲರೂ ಸಮಾನಾಗಿ ನೋಡುವ ವ್ಯವಸ್ಥೆ ರಾಮಕೃಷ್ಣ ಮಠಗಳಲ್ಲಿದೆ ಎಂದರು. ಸನ್ಯಾಸಿಯಾದವನು ಸಮಾಜಕ್ಕೆ ಅಂಟುಕೊಳ್ಳಬಾರದು. ಸನ್ಯಾಸಿಗೆ ದೇಶ- ಭಾಷೆಗಳಿರುವುದಿಲ್ಲ. ಆತ ವಿಶ್ವಮಾನವಾಗಿರಬೇಕು ಎಂದರು.
ವಿವೇಕ ತೋರಣದ ಸಂಯೋಜಕ ಪ್ರಭುದೇವ ಕಪ್ಪಗಲ್ಲು, ಸಂಚಾಲಕ ಸಿ. ಎರಿಸ್ವಾಮಿ ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸ ಶುರು ಮುನ್ನ ರಾಘವೇಂದ್ರ ಗುಡದೂರು ಅವರು ಭಕ್ತಿ ಸಂಗೀತ ನಡೆಸಿಕೊಟ್ಟರು.13 ಬಿಆರ್‌ವೈ 2 13 ಬಿಆರ್‌ವೈ 2