ಕ್ರೀಡೆಗೂ ಶಿಕ್ಷಣದಷ್ಟೇ ಮಹತ್ವ ನೀಡಿ

| Published : Sep 15 2024, 01:50 AM IST

ಸಾರಾಂಶ

ದೇವನಹಳ್ಳಿ: ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೆ ಸಾಲದು. ಜತೆಗೆ ಪಠ್ಯೇತರ ಚಟುವಟಿಕೆ, ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು. ಉತ್ತಮ ಕ್ರೀಡಾಪಟುಗಳಿಗೆ ಖಾಸಗಿ ಕಂಪನಿ ಅಥವಾ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ದೇವನಹಳ್ಳಿ: ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೆ ಸಾಲದು. ಜತೆಗೆ ಪಠ್ಯೇತರ ಚಟುವಟಿಕೆ, ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು. ಉತ್ತಮ ಕ್ರೀಡಾಪಟುಗಳಿಗೆ ಖಾಸಗಿ ಕಂಪನಿ ಅಥವಾ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.ತಾಲೂಕಿನ ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾ ಸಂಘ ಆಯೋಜಿಸಿದ್ದ 15 ಮತ್ತು 19 ವಯೋಮಾನದ ವಿದ್ಯಾರ್ಥಿಗಳಿಗೆ ಷಟಲ್‌ ಬ್ಯಾಡ್‌ಮಿಂಟನ್‌ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಯಾವುದಾದರೂ ಒಂದು ಕ್ರೀಡೆಯಲ್ಲಿ ಸತತ ಅಭ್ಯಾಸ ಮಾಡಬೇಕು. ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಪೂರಕ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಮಕ್ಕಳಲ್ಲಿ ಏಕಾಗ್ರತೆಯನ್ನು ವೃದ್ಧಿಸಿ ಶಿಕ್ಷಣಕ್ಕೂ ಸಹಾಯವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಕೇವಲ ಅಂಕ ಗುರಿ ಇಟ್ಟುಕೊಂಡು ಪುಸ್ತಕ ಓದಲು ಮಾತ್ರ ಬಿಡದೆ, ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆ ಬೆಳೆಸುವ ಕ್ರೀಡೆಗಳತ್ತಲೂ ಗಮನಹರಿಸಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್‌ ಮಾತನಾಡಿ, ಕ್ರೀಡೆಗಳು ಮಕ್ಕಳಲ್ಲಿ ಕ್ರಿಯಾತ್ಮಕತೆ, ಏಕಾಗ್ರತೆ, ವ್ಯಕ್ತಿತ್ವ ವಿಕಸವನ್ನು ವೃದ್ಧಿಗೊಳಿಸುತ್ತವೆ. ಪೋಷಕರು ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸಬೇಕು. ಕ್ರೀಡೆಗಳನ್ನು ಪ್ರೋತ್ಸಾಹಿಸುವುದರಿಂದ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲ್ಲಿಯೂ ಉತ್ತಮ ಭವಿಷ್ಯವಿದೆ ಎಂಬುದು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌ ಸಂಘದ ಎದುರು ಭಾಗದಲ್ಲಿರುವ ಉದ್ಯಾನವನ ಅಭಿವೃದ್ಧಿಯಿಂದ ಮಕ್ಕಳಿಗೆ ಅನುಕೂಲವಾಗಲಿದ್ದು, ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬ್ಯಾಡ್‌ಮಿಂಟನ್‌ ಅಸೋಸಿಯೇಷನ್‌ ಕಾರ್ಯದರ್ಶಿ ರಾಜೇಶ್‌ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಮಂಜುನಾಥ್‌, ಬಯಪ ಅಧ್ಯಕ್ಷ ವಿ.ಶಾಂತಕುಮಾರ್‌, ಸದಸ್ಯರಾದ ವಿ.ಮಂಜುನಾಥ್‌, ಪುರಸಭಾ ಸದಸ್ಯರಾದ ಎನ್‌.ರಘು, ಜಿ.ಎ.ರವೀಂದ್ರ, ಮುನಿಕೃಷ್ಣ, ಗೋಪಿ, ಕಾರ್ಯದರ್ಶಿ ಜಿ.ಶ್ರೀನಿವಾಸ್‌ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ದೇವನಹಳ್ಳಿಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾ ಸಂಘ ಆಯೋಜಿಸಿದ್ದ ಷಟಲ್‌ ಬ್ಯಾಡ್‌ಮಿಂಟನ್‌ ಪಂದ್ಯಾವಳಿಗೆ ಸಚಿವ ಕೆ.ಎಚ್‌.ಮುನಿಯಪ್ಪ ಚಾಲನೆ ನೀಡಿದರು.