ವಿವಿಧ ಯೋಜನೆಗಳಿಗೆ ಲಕ್ಷಾಂತರ ಎಕರೆ ಅರಣ್ಯ ಕ್ಷೇತ್ರವನ್ನು ಅರಣ್ಯೇತರ ಚಟುವಟಿಕೆಗೆ ಬಿಡುಗಡೆಗೊಳಿಸಿದ್ದು, ಅದೇ ರೀತಿ ಅರಣ್ಯವಾಸಿಗಳಿಗೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿ ಬಿಡುಗಡೆಗೊಳಿಸಲಿ ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಕುಮಟಾ: ಯೋಜನೆಗಳಿಗೆ ಧಾರಾಳವಾಗಿ ಅರಣ್ಯ ಭೂಮಿ ಬಿಡುಗಡೆ ಮಾಡುವ ಸರ್ಕಾರದ ನೀತಿಯಂತೆ ಜಿಲ್ಲೆಯ ೮೦ ಸಾವಿರ ಅರಣ್ಯವಾಸಿಗಳಿಗೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿ ಬಿಡುಗಡೆಗೊಳಿಸಲಿ ಎಂದು ಸರ್ಕಾರಕ್ಕೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.

ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಪ್ರಮುಖ ರಸ್ತೆಗಳಲ್ಲಿ ಜಾಥಾದಲ್ಲಿ ಪಾಲ್ಗೊಂಡು ಮಹಾಸತಿ ದೇವಸ್ಥಾನದ ಸಭಾಂಗಣದಲ್ಲಿ ಅರಣ್ಯವಾಸಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣುಸ್ಥಾವರ, ಸೀಬರ್ಡ್, ೫ ಜಲವಿದ್ಯುತ್ ಯೋಜನೆಗಳು, ರೈಲ್ವೆ ಮುಂತಾದ ವಿವಿಧ ಯೋಜನೆಗಳಿಗೆ ಲಕ್ಷಾಂತರ ಎಕರೆ ಅರಣ್ಯ ಕ್ಷೇತ್ರವನ್ನು ಅರಣ್ಯೇತರ ಚಟುವಟಿಕೆಗೆ ಬಿಡುಗಡೆಗೊಳಿಸಿದೆ. ಹೊನ್ನಾವರ ಶರಾವತಿ ಪಂಪ್ ಸ್ಟೋರೆಜ್‌ಗೆ 1 ಲಕ್ಷದ 2 ಸಾವಿರ ಎಕರೆ ಅರಣ್ಯ ಪ್ರದೇಶ ಯೋಜನೆಗೆ ನಿಗದಿಗೊಳಿಸಿದೆ ಎಂದು ತಿಳಿದುಬಂದಿದೆ. ಅದರಂತೆ, ಜೀವನಕ್ಕಾಗಿ, ವಾಸ್ತವ್ಯಕ್ಕಾಗಿ, ಸಾಗುವಳಿಗಾಗಿ ಜಿಲ್ಲೆಯಲ್ಲಿ ೮೦,೬೮೪ ಅರಣ್ಯವಾಸಿ ಕುಟುಂಬಗಳು ೫೦,೦೦೫ ಎಕರೆ ಅತಿಕ್ರಮಿಸಿದ್ದಾರೆ. ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಲು ಸುಪ್ರಿಂ ಕೊರ್ಟಿನ ನಿರ್ಣಯ ಮತ್ತು ರಾಷ್ಟ್ರೀಯ ಅರಣ್ಯ ನೀತಿಯಿಂದಾಗಿ ಅರಣ್ಯವಾಸಿಗಳಿಗೆ ತೊಡಕಾಗಿದೆ. ಅರಣ್ಯವಾಸಿಗಳಿಗೆ ಸಾಗುವಳಿಗೆ ಅರಣ್ಯ ಭೂಮಿ ಹಕ್ಕಿಗೆ ಸಂಬಂಧ ಪಟ್ಟಂತೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದರು. ಸಭೆಯಲ್ಲಿ ಅರಣ್ಯವಾಸಿಗಳಿಗೆ ಡಿ. 6ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಆಕ್ಷೇಪ ಪತ್ರ ವಿತರಿಸಿದರು.ಸಭೆಯಲ್ಲಿ ತಾಲೂಕಾಧ್ಯಕ್ಷ ಮಂಜು ಮರಾಠಿ ಪ್ರಾಸ್ತಾವಿಕ ಮಾತನಾಡಿದರು. ಮಹೇಂದ್ರ ನಾಯ್ಕ ಕತಗಾಲ, ರಾಜು ಗೌಡ, ಸುಲೋಚನಾ ಮುಕ್ರಿ, ಜಗದೀಶ್ ನಾಯ್ಕ, ಸುನಿಲ್ ಆರ್ ಹರಿಕಂತ್ರ, ಯಾಕುಬ್, ಸಾರಂಬಿ, ಕುಸಂಬಿ ಅಹ್ಮದ್, ಸೀತಾರಾಮ ನಾಯ್ಕ, ಜ್ಯೋತಿ ಗಾವಡಿ, ಪಾಂಡುರಂಗ ದಿವಗಿ, ಜ್ಯೋತಿ ಅಂಬಿಗ, ಮಾದೇವ ಹಳ್ಳೇರ, ಜಗದೀಶ ಹರಿಕಂತ್ರ, ಮಂಗಲ ಗೋವಿಂದ ಹಳ್ಳೇರ, ಗುಲಾಬಿ ಹಳ್ಳೇರ, ಕಮಲಾಕ್ಷಿ ಹಳ್ಳೇರ, ವೆಂಕಟರಮಣ ಪಟಗಾರ, ಶೇಖರ ಪಟಗಾರ ಗಣಪತಿ ಮಾಸ್ತಿ, ರಾಜ ಮುಕ್ರಿ, ಜಯಂತ ಮರಾಠಿ, ಗಣಪತಿ ಮರಾಠಿ, ಯೋಗೇಂದ್ರ ಚಿದಾನಂದ ಇತರರಿದ್ದರು. ನಿರಾಶ್ರಿತರಾಗದಂತೆ ಎಚ್ಚರಿಕೆ ವಹಿಸಲಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 80,684 ಕುಟುಂಬಗಳು, ಒಟ್ಟು 53,005 ಎಕರೆ ಅರಣ್ಯ ಪ್ರದೇಶವನ್ನು ಜೀವನಕ್ಕಾಗಿ ಅತಿಕ್ರಮಿಸಿದ್ದಾರೆ. ಅವುಗಳಲ್ಲಿ ಒಂದು ಎಕರೆಗಿಂತ ಕಡಿಮೆ ಅತಿಕ್ರಮಿಸಿದವರು 52,382 (ಶೇ.64.92) ಕುಟುಂಬಗಳು. ಮೂರು ಎಕರೆಗಿಂತ ಹೆಚ್ಚು ಅತಿಕ್ರಮಿಸಿದವರು 3984 (ಶೇ. 5.64) ಕುಟುಂಬಗಳು. ಸರ್ಕಾರ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅಥವಾ ಅರಣ್ಯೇತರ ಚಟುವಟಿಕೆಗೆ ಅರಣ್ಯ ಭೂಮಿ ಬಿಡುಗಡೆಗೊಳಿಸಿ ಅರಣ್ಯವಾಸಿಗಳು ನಿರಾಶ್ರಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.