ಸಾಗರ ಖಂಡ್ರೆಗೆ ಬಹುಮತ ನೀಡಿ ಗೆಲ್ಲಿಸಿ: ಗೀತಾ ಖಂಡ್ರೆ

| Published : Apr 04 2024, 01:01 AM IST

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳಾದ ಪ್ರತಿ ಕುಟುಂಬಕ್ಕೆ 1ಲಕ್ಷ ರುಪಾಯಿ, ನಿರೂದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿನಾಥನ್‌ ವರದಿ ಜಾರಿ ಮಾಡಲಾಗುವುದು. ಕಾಂಗ್ರೆಸ್‌ ಘೋಷಿತ ಅಭ್ಯರ್ಥಿ ಸಾಗರ ಪರವಾಗಿ ಬಸವಕಲ್ಯಾಣದಲ್ಲಿ ತಾಯಿ ಡಾ.ಗೀತಾ ಖಂಡ್ರೆ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದು 6 ಗ್ಯಾರಂಟಿಗಳನ್ನು ಜಾರಿಗೊಳಿಸಿ ಅದರಂತೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಕ್ಷ ದೇಶದ ಜನತೆಗೆ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲಾಗುತ್ತದೆ ಎಂದು ಕಾಂಗ್ರೆಸ್‌ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಅವರ ತಾಯಿ ಡಾ. ಗೀತಾ ಖಂಡ್ರೆ ಭರವಸೆ ನೀಡಿದರು.

ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ನಗರದ ವಿಠೋಬಾಗಲ್ಲಿ, ಹಿರೇಮಠ ಕಾಲೋನಿ, ಮಲ್ಲಿಕಾರ್ಜುನ ಗಲ್ಲಿಯ ಮನೆ ಮನೆಗಳಿಗೆ ತೆರಳಿ ಮತಯಾಚಿಸಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳಾದ ಪ್ರತಿ ಕುಟುಂಬಕ್ಕೆ 1ಲಕ್ಷ ರುಪಾಯಿ, ನಿರೂದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿನಾಥನ್‌ ವರದಿ ಜಾರಿ ಮಾಡಲಾಗುವುದು. ಹೀಗಾಗಿ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಭಾಲ್ಕಿಯ ರೇಖಾ ಪಾಟೀಲ್‌ ಮಾತನಾಡಿ, ಕಳೆದ 2 ಅವಧಿಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿ ಬಂದರೂ ಏನೂ ಕೆಲಸ ಮಾಡಿಲ್ಲ. ಈಗ ಯುವ ಉತ್ಸಾಹಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಅವರಿಗೆ ಆಯ್ಕೆ ಮಾಡಿ ಕಳುಹಿಸುವದರಿಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈ ಬಲಪಡಿಸಿದಂತಾಗುತ್ತದೆ ಎಂದು ನುಡಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಲಿದೆ. ಪ್ರತಿ ಬಡ ಕುಟಂಬಕ್ಕೆ ಪ್ರತಿ ವರ್ಷ ಒಂದು ಲಕ್ಷ ರುಪಾಯಿ ಬರಲಿದೆ. ದೇಶದ ಬಡ ಜನರ ಸ್ಥಿತಿ ಸುಧಾರಿಸಲಿದೆ ಎಂದರು.

ಈ ಸಂದರ್ಭದಲ್ಲಿ ಅರ್ಚನಾ ತೊಂಡಾರೆ, ಭಾರತಿ ಅವಸೆ, ಪ್ರಭಾವತಿ ಅವಸೆ, ಉಮಾ ದುರ್ಗೆ, ಶಾರದಬಾಯಿ ಸಂಗೂಳಗೆ, ಅಂಜನಾ ಮೂಲಗೆ, ರಂಜನಾ ದುರ್ಗೆ, ಸಂಗೀತಾ ಪಾಟೀಲ್‌, ಸುನೀತಾ ಬುಳ್ಳಾ, ಕೀರ್ತಿ ಪಾಟೀಲ್‌, ಕಮಲಾ ಸಜ್ಜನಶೆಟ್ಟಿ, ಶಶಿಕಾಂತ ದುರ್ಗೆ, ವಿಶ್ವನಾಥ ಪಾಟೀಲ್‌, ಬಸವಂತಯ್ಯ ಸ್ವಾಮಿ, ವಿಜಯಕುಮಾರ ಹಾರಕೂಡೆ, ಸಂಗಮೇಶ ಅವಸೆ, ಚಂದ್ರಕಾಂತ ಧುಮ್ಮನಸೂರೆ, ಪ್ರಕಾಶ ಕಿರುಣಗೆ, ಚೆನ್ನಪ್ಪ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.