ಸಂವಿಧಾನ ಉಳಿವಿಗಾಗಿ ಬಿಜೆಪಿ ಹಿಮ್ಮೆಟ್ಟಿಸುವುದು ಅಗತ್ಯ

| Published : Apr 04 2024, 01:01 AM IST

ಸಂವಿಧಾನ ಉಳಿವಿಗಾಗಿ ಬಿಜೆಪಿ ಹಿಮ್ಮೆಟ್ಟಿಸುವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ದಲಿತ, ಹಿಂದುಳಿದ ಹಾಗೂ ಪ್ರಗತಿಪರರು ಕೋಮುವಾದಿ ಬಿಜೆಪಿ ಪಕ್ಷವನ್ನು ಹಿಮ್ಮೆಟ್ಟಿಸಬೇಕು. ರಾಜಕೀಯ ಪಕ್ಷಗಳಿಗಿಂತ ಸಂವಿಧಾನ ಉಳಿವಿಗಾಗಿ ಸಾಮಾಜಿಕ ಚಳುವಳಿಗಳ ಜವಾಬ್ದಾರಿ ದೊಡ್ಡದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿ ಒಕ್ಕೂಟಗಳ ರಾಜ್ಯ ಸಂಚಾಲಕ ಬಸವರಾಜ್ ಕೌತಲ್ ಹೇಳಿದರು.

ಚಿತ್ರದುರ್ಗ: ಎಲ್ಲಾ ದಲಿತ, ಹಿಂದುಳಿದ ಹಾಗೂ ಪ್ರಗತಿಪರರು ಕೋಮುವಾದಿ ಬಿಜೆಪಿ ಪಕ್ಷವನ್ನು ಹಿಮ್ಮೆಟ್ಟಿಸಬೇಕು. ರಾಜಕೀಯ ಪಕ್ಷಗಳಿಗಿಂತ ಸಂವಿಧಾನ ಉಳಿವಿಗಾಗಿ ಸಾಮಾಜಿಕ ಚಳುವಳಿಗಳ ಜವಾಬ್ದಾರಿ ದೊಡ್ಡದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿ ಒಕ್ಕೂಟಗಳ ರಾಜ್ಯ ಸಂಚಾಲಕ ಬಸವರಾಜ್ ಕೌತಲ್ ಹೇಳಿದರು.

ಚಿತ್ರದುರ್ಗ ನಗರದ ರೋಟರಿ ಸಭಾಭವನದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ವತಿಯಿಂದ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ ಮತದಾನದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಬಿಜೆಪಿ ಸರಕಾರ ಇಡ್ಲ್ಯೂಎಸ್ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕೊಡುವಾಗ ಹೊಂದಿರುವ ಕಾಳಜಿ, ಪರಿಶಿಷ್ಟ ಜಾತಿಯವರ ಒಳಮೀಸಲಾತಿಗೆ ತೋರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ವರ್ಗೀಕರಣಕ್ಕಾಗಿ ನಡೆದ ಸುಮಾರು 30 ವರ್ಷಗಳ ಹಕ್ಕೊತ್ತಾಯ ಚಳುವಳಿ ನಿರ್ಲಕ್ಷ್ಯ ಮಾಡಿದ್ದು, ಸಾಮಾಜಿಕ ನ್ಯಾಯಕ್ಕೆ ಮಾಡಿದ ವಂಚನೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆ ಎಂದರೆ ಜನಸಾಮಾನ್ಯರ ಸಾರ್ವಭೌಮತ್ವದ ಚುನಾವಣೆ. ಇಂದು ದೇವೇಗೌಡ್ರು ಪ್ರಧಾನಿ ಮೋದಿ ಜತೆಯಲ್ಲಿ ಅಥವಾ ಸಂಸದೆ ಸುಮಲತಾ ಕುಮಾರಸ್ವಾಮಿ ಜತೆಗೆ ರಾಜಿಯಾಗಬಹುದು. ಏಕೆಂದರೆ ಅವರಿಗೆ ರಾಜಕೀಯ ಅನಿವಾರ್ಯತೆ ಇದೆ. ಆದರೆ ಜನಸಾಮಾನ್ಯರಿಗೆ ಬದುಕಿನ ಭದ್ರತೆಯ ಅನಿವಾರ್ಯತೆ ಇದೆ. ಸಾಮಾನ್ಯರ ನೆಮ್ಮದಿಯ ಬದುಕಿಗೆ ಸಂವಿಧಾನದ ಉಳಿವಿನ ಅಗತ್ಯ ಅವಶ್ಯಕ ಹಾಗೂ ಅನಿವಾರ್ಯ ಎಂದರು.

ನೋಟು ಮುದ್ರಿಸುವ, ಯುದ್ಧ ಸಾರುವ ಅಥವಾ ನಿಲ್ಲಿಸುವ, ತುರ್ತು ಪರಿಸ್ಥಿತಿ ಹೇರುವ, ಪೌರತ್ವ ನೀಡುವ, ನಿರಾಕರಿಸುವ, ಮೂಲಭೂತ ಹಕ್ಕುಗಳು ಸಂರಕ್ಷಿಸುವ, ಸಾಮಾಜಿಕ ನ್ಯಾಯಕ್ಕಾಗಿ ಅನುಗುಣವಾಗಿ ಮೀಸಲಾತಿ ಹಂಚುವ, ಸಂವಿಧಾನ ಉಳಿಸುವ ಅಥವಾ ಬದಲಾಯಿಸುವ ಹಕ್ಕುಗಳನ್ನು ಚಲಾಯಿಸುವ ಜನಪ್ರತಿನಿಧಿಗಳು ಬಾಬಾ ಸಾಹೇಬರು ಹೇಳಿದಂತೆ ಬ್ಯಾಲೆಟ್ ಬಾಕ್ಸ್ ನಿಂದ ಹುಟ್ಟುತ್ತಾರೆ. ಇಷ್ಟೊಂದು ಮಹತ್ವ ಪಡೆದಿರುವ ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆ ಇವಿಎಂ ಮತಯಂತ್ರ ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನೇ ಅಣಕ ಮಾಡಿದಂತಿದೆ ಎಂದರು.

ಇವಿಎಂ ಮತಯಂತ್ರ ಬಳಕೆ ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಭಾರತದ ನಿರಂಕುಶ ಆಡಳಿತಕ್ಕೆ ಮುನ್ನುಡಿ. ಈ ಇವಿಎಂ ಮತಯಂತ್ರದಲ್ಲಿ ಅಳವಡಿಸಿರುವ ಸಾಫ್ಟ್ ವೇರ್ ತಂತ್ರಜ್ಞಾನವು ಒಂದು ಕಂಪನಿ ಹಿಡಿತದಲ್ಲಿರುತ್ತದೆ. ಇವಿಎಂಗಳ ಡಿಜಿಟಲ್ ಸ್ವರೂಪವು ಹ್ಯಾಕಿಂಗ್ ಮತ್ತು ಟ್ಯಾಪಿಂಗ್‍ಗೆ ಗುರಿಯಾಗುವಂತೆ ಮಾಡುತ್ತದೆ. ಇದು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಇದು ನಾಗರೀಕರಿಗೆ ತನ್ನ ಮತದಾನ ಖಚಿತಪಡಿಸುವ ಹಕ್ಕನ್ನು ನಿರಾಕರಿಸುತ್ತದೆ ಎಂದರು.

ಭೀಮನಕೆರೆ ಶಿವಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ತುರುವನೂರು ಜಗನ್ನಾಥ್, ಕನ್ನಡ ಒಕ್ಕೂಟ ಸಮಿತಿ ಶಫೀವುಲ್ಲಾ, ಉಪನ್ಯಾಸಕ ಇಂಧೂದರ್ ಗೌತಮ್ ಮಾತನಾಡಿದರು. ಹುಲ್ಲೂರು ಕುಮಾರಸ್ವಾಮಿ, ವಕೀಲ ಚಂದ್ರಪ್ಪ, ಲಾಯರ್ ಕುಮಾರ್ ಇದ್ದರು.

-------

- 3 ಸಿಟಿಡಿ9-

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ ಮತದಾನದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ವಿಷಯ ಕುರಿತ ವಿಚಾರ ಸಂಕಿರಣದಲ್ಲಿಪರಿಶಿಷ್ಠ ಜಾತಿ ಒಕ್ಕೂಟಗಳ ರಾಜ್ಯ ಸಂಚಾಲಕ ಬಸವರಾಜ್ ಕೌತಲ್ ಮಾತನಾಡಿದರು.