ಕನ್ನಡಪ್ರಭ ವಾರ್ತೆ ರಾಮನಗರ
ಮಾಗಡಿ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆ ಪ್ರವೇಶಿಸಿರುವ ಬಾಲಕೃಷ್ಣ ಹಿರಿಯ ರಾಜಕಾರಣಿ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆ ಹಿರಿತನ ಮತ್ತು ನಿಷ್ಠೆಗೆ ಮನ್ನಣೆ ನೀಡಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಜಯಚಂದ್ರ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನೀಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಬೇಕು ಎಂದರು.
ಬಾಲಕೃಷ್ಣರವರು ಕಾಂಗ್ರೆಸ್ ಸೇರಿದ ಮೇಲೆ ಜಿಲ್ಲೆಯಲ್ಲಿ ಪಕ್ಷವನ್ನು ಬಲ ಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದರ ಹಿಂದೆ ಬಾಲಕೃಷ್ಣರವರ ಶ್ರಮವೂ ಇದೆ. ಅವರಿಗೆ ಸಚಿವರಾಗುವ ಎಲ್ಲ ಅರ್ಹತೆಗಳಿವೆ ಎಂದು ಹೇಳಿದರು.ರಾಜ್ಯದ ಹಿರಿಯ ನಾಯಕರ ಪೈಕಿ ಬಾಲಕೃಷ್ಣರವರು ಒಬ್ಬರಾಗಿದ್ದು, ಅವರು ಎಂದೋ ಸಚಿವರಾಗಬೇಕಿತ್ತು. ಅವರು ಹಿಂದೆ ಇದ್ದ ಪಕ್ಷ ಯಾವಾಗಲು ಬಹುಮತದ ಸರ್ಕಾರ ರಚನೆ ಮಾಡದಿರುವುದು ಹಿನ್ನಡೆಗೆ ಕಾರಣವಾಯಿತು. ಈಗ ನಮ್ಮ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿ ಆಗಿರುವುದರಿಂದ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈಗಾಗಲೇ ಬಾಲಕೃಷ್ಣರವರು ಸಚಿವರಾಗಿದ್ದಾರೆಂದು ಆಶಾವಾದಿಗಳಾಗಿದ್ದಾರೆ. ಅವರನ್ನು ನಿರಾಶವಾದಿಗಳ್ನಾಗಿಸದೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ನಿಗಮ- ಮಂಡಳಿಯಲ್ಲಿ ಅವಕಾಶ ನೀಡಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ದುಡಿದು ದಲಿತರ ಮತಗಳನ್ನು ಕ್ರೋಢೀಕರಿಸಲು ಶ್ರಮ ವಹಿಸಿದ್ದೇನೆ. ಈ ಹಿಂದೆ ತಾಪಂ ಸದಸ್ಯ ಮತ್ತು ಅಧ್ಯಕ್ಷನಾಗಿ ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಿವಂಗತ ಕೆ.ಶಿವರಾಮುರವರ ಧರ್ಮಪತ್ನಿ ವಾಣಿ ಶಿವರಾಮು ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ನಿಗಮ- ಮಂಡಳಿಯಲ್ಲಿ ಅವಕಾಶ ನೀಡಬೇಕು ಎಂದು ಜಯಚಂದ್ರ ಒತ್ತಾಯಿಸಿದರು.ವಾಣಿ ಕೆ.ಶಿವರಾಮುಗೆ ವಿಪ ಸದಸ್ಯ ಸ್ಥಾನ ನೀಡಿ:
ಬಿಡದಿ - ಕೂಟಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗ ಅಧ್ಯಕ್ಷ ಬಿ. ಶೇಖರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ದಲಿತರು ನಿರ್ಣಾಯಕ ಪಾತ್ರ ವಹಿಸಿದರು. ಆದ್ದರಿಂದ ದಲಿತ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಬೇಕು. ಜೊತೆಗೆ ವಾಣಿ ಕೆ.ಶಿವರಾಮು ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು.ಭಾರತಾ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್ ಮಾತನಾಡಿ, ಶಾಸಕ ಬಾಲಕೃಷ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಸರ್ವ ಸಮುದಾಯದ ನಾಯಕರಾಗಿದ್ದು, ಎಲ್ಲರಿಗೂ ಸಹಾಯ ಹಸ್ತ ಚಾಚುತ್ತಿದ್ದಾರೆ. ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರಲು ಕಾರಣರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಡದಿ ಪುರಸಭೆ ಸದಸ್ಯ ಶ್ರೀನಿವಾಸ್, ಗ್ರಾಪಂ ಮಾಜಿ ಸದಸ್ಯ ಮುರುಳಿ, ಮುಖಂಡರಾದ ಮಂಜು, ಕೃಷ್ಣಮೂರ್ತಿ, ರಾಮಣ್ಣ ಕೆಂಚನಕುಪ್ಪೆ, ಆರ್. ಸಿದ್ದರಾಜು, ಮುತ್ತುರಾಜ್ ಹೆಗ್ಗಡಗೆರೆ ಇದ್ದರು.--
ದಿವಂಗತ ಕೆ.ಶಿವರಾಮುರವರ ಪತ್ನಿ ವಾಣಿ ಶಿವರಾಮುರವರು ದಲಿತರ ನಡಿಗೆ ಕಾಂಗ್ರೆಸ್ ಕಡೆಗೆ ಎಂಬ ವಿಭಿನ್ನ ಅಭಿಯಾನ ನಡೆಸುವ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಮತ್ತು ಕೆ.ಶಿವರಾಮು ಅಭಿಮಾನಿಗಳು ಕಾಂಗ್ರೆಸ್ ಬೆಂಬಲಿಸಲು ನೆರವಾದರು. ಹಾಗಾಗಿ ಕಾಂಗ್ರೆಸ್ ಪಕ್ಷವು ವಾಣಿ ಶಿವರಾಮು ಅವರಿಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು.- ಜಯಚಂದ್ರ, ಮಾಜಿ ಅಧ್ಯಕ್ಷರು, ತಾಪಂ, ರಾಮನಗರ.