ಸಾರಾಂಶ
ಬೋಗಾದಿ ಸರ್ಕಾರಿ ಪ್ರೌಢಶಾಲೆಯ 7 ಕೊಠಡಿಗಳಿಗೆ ಬಣ್ಣ ಬಳಿದು ಸಾಮಾಜಿಕ ಕಾರ್ಯ
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಬೋಗಾದಿ ಸರ್ಕಾರಿ ಪ್ರೌಢಶಾಲೆಯ 7 ಕೊಠಡಿಗಳಿಗೆ ಇಂಡಿಗೋ ಪೇಂಟ್ಸ್ ಕಂಪನಿ ವತಿಯಿಂದ ಬಣ್ಣ ಹೊಡಿಸುವ ಮೂಲಕ ಶಾಲಾ ಕಟ್ಟಡಕ್ಕೆ ಹೊಸ ಮೆರುಗು ನೀಡಿ ಮಕ್ಕಳ ಕಲಿಕೆಗೆ ಪೂರಕವಾದ ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ.
ಕಂಪನಿಯ ದಕ್ಷಿಣ ಕರ್ನಾಟಕ ಶಾಖಾ ವ್ಯವಸ್ಥಾಪಕ ಪ್ರವೀಣ್ ಘಾಟ್ಗೆ ಮಾತನಾಡಿ, ಪ್ರತಿ ವರ್ಷವೂ ಕೂಡ ನಮ್ಮ ಕಂಪನಿ ವತಿಯಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಮತ್ತು ಶಾಲೆಯ ಅಂದ ಹೆಚ್ಚಿಸುವ ಉದ್ದೇಶದಿಂದ ಹೊಸದಾಗಿ ಬಣ್ಣವನ್ನು ಬಳಿಸಿ ಮೆರುಗು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.ತಾಲೂಕಿನ ಬೋಗಾದಿಯ ಮಾನಸ ಹಾರ್ಡ್‌ವೇರ್ ಮತ್ತು ಪೇಂಟ್ಸ್ ಇವರ ಸಹಯೋಗದೊಂದಿಗೆ ಸ್ಥಳೀಯ 30ಕ್ಕೂ ಹೆಚ್ಚು ಪೈಂಟರ್ಸ್ ಗಳ ಜೊತೆಗೂಡಿ ಶಾಲೆಗೆ ಬಣ್ಣ ಹೊಡೆಸುವ ಮೂಲಕ ಮಕ್ಕಳ ಕಲಿಕೆಗೆ ಉತ್ಸಾಹ ತುಂಬಿದ್ದೇವೆ ಎಂದು ತಿಳಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ಬೋಗಾದಿ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕ ಟಿ. ತಿಮ್ಮರಾಯಿಗೌಡ ಮಾತನಾಡಿ, ಇಂಡಿಗೋ ಪೇಂಟ್ಸ್ ಕಂಪನಿ ವತಿಯಿಂದ ನಮ್ಮ ಶಾಲೆಗೆ ಹೊಸದಾಗಿ ಬಣ್ಣ ಬಳಿಯುತ್ತಿರುವುದು ಸಂತಸದ ವಿಚಾರ. ಸರ್ಕಾರಿ ಶಾಲೆ ಉಳಿವಿಗಾಗಿ ಪ್ರತಿಯೊಬ್ಬರೂ ಕೂಡ ಆಸಕ್ತಿ ವಹಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿರುವ ಬಹುತೇಕ ಮಂದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಾಮಾಜಿಕ ಕಳಕಳಿ ಇಟ್ಟುಕೊಂಡಿರುವ ಇಂಡಿಗೋ ಪೇಂಟ್ಸ್ ಕಂಪನಿಯವರಿಗೆ ಶಾಲೆ ಹಾಗೂ ಎಸ್‌ಡಿಎಂಸಿ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಬೋಗಾದಿಯ ಮಾನಸ ಹಾರ್ಡ್‌ವೇರ್ ಮತ್ತು ಪೇಂಟ್ಸ್ ಅಂಗಡಿ ಮಾಲೀಕ ಮಂಜುನಾಥ್. ಶಿಕ್ಷಕರಾದ ವಿಜಯಲಕ್ಷ್ಮೀ. ರಾಜೇಶ್ವರಿ. ಭವ್ಯ. ಅನುಷ. ಸಂತೋಷ್ ಕುಮಾರ್, ಇಂಡಿಗೋ ಪೇಂಟ್ಸ್ ಕಂಪನಿಯ ಸಿಬ್ಬಂದಿ ಸಂಪತ್. ರಾಜೀವ್. ಚಂದ್ರು. ದೀಕ್ಷಿತ್. ಚಂದನ್. ಕಾಶಿನಾಥ್. ಬಸವೇಗೌಡ ಸೇರಿದಂತೆ ಹಲವರು ಇದ್ದರು.