ಸೂರ್ಯ ನಮಸ್ಕಾರದಿಂದ ಸದೃಢ ಆರೋಗ್ಯ

| Published : Feb 05 2025, 12:33 AM IST

ಸಾರಾಂಶ

ಶಿವಮೊಗ್ಗ: ಸೂರ್ಯ ನಮಸ್ಕಾರದಿಂದ ಸರ್ವ ರೋಗವು ಗುಣವಾಗುವುದರ ಜೊತೆಗೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾ.ಸಿ.ವಿ.ರುದ್ರಾರಾಧ್ಯ ಹೇಳಿದರು.

ಶಿವಮೊಗ್ಗ: ಸೂರ್ಯ ನಮಸ್ಕಾರದಿಂದ ಸರ್ವ ರೋಗವು ಗುಣವಾಗುವುದರ ಜೊತೆಗೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾ.ಸಿ.ವಿ.ರುದ್ರಾರಾಧ್ಯ ಹೇಳಿದರು.ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಏರ್ಪಡಿಸಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೂರ್ಯ ನಮಸ್ಕಾರ ಆಸನಗಳ ಒಂದು ರಾಜ. ದೇಹದಲ್ಲಿ ಎಲ್ಲಾ ಅಂಗಾಂಗಗಳಲ್ಲಿ ರಕ್ತ ಚೆನ್ನಾಗಿ ಸಂಚಾರ ಆಗುವುದರಿಂದ ದೇಹದಲ್ಲಿ ಯಾವುದೇ ಕಾಯಿಲೆಗಳು ನಮಗೆ ಬರುವುದಿಲ್ಲ. ನಿರಂತರವಾಗಿ ಅಭ್ಯಾಸ ಮಾಡುವುದರಿಂದ ನಾವುಗಳು ಸದಾ ಲವಲವಿಕೆ ಹಾಗೂ ಆರೋಗ್ಯವಂತರಾಗಿರುತ್ತೇವೆ ಎಂದು ತಿಳಿಸಿದರು.

ಸಕಲ ಜೀವರಾಶಿಗೂ ಸೂರ್ಯನು ಬೇಕೇ ಬೇಕು. ಸೂರ್ಯನಿಲ್ಲದಿದ್ದರೆ ಬದುಕೇ ಇಲ್ಲ. ಸೂರ್ಯದೇವನನ್ನು ಪ್ರಾರ್ಥಿಸಿ ಶಕ್ತಿ ಅನುಸಾರ ನಮಸ್ಕಾರಗಳನ್ನು ಮಾಡಿದರೆ ಆರೋಗ್ಯ ವೃದ್ಧಿಯಾಗುವುದು ಎಂದ ಅವರು, 15 ದಿನ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಿರುವ ಎಲ್ಲರಿಗೂ ಸೂರ್ಯದೇವ ಒಳಿತು ಮಾಡಲಿ ಎಂದು ಆಶಿಸಿದರು.

ಬೆಳಗ್ಗೆ 5.30ಕ್ಕೆ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ 6 ಗಂಟೆಗೆ ಸರಿಯಾಗಿ ಅಖಂಡ ಸೂರ್ಯ ನಮಸ್ಕಾರ ಪ್ರಾರಂಭವಾಯಿತು. ಯೋಗ ಗುರು ಡಾ.ಪದ್ಮನಾಭ ಅಡಿಗ ಅವರು ರಥಸಪ್ತಮಿ ಹಾಗೂ ಸೂರ್ಯ ನಮಸ್ಕಾರದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಾಖೆಗಳಿಂದ ಸಾವಿರಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯ ನಮಸ್ಕಾರ ಮಾಡಿದರು. 300ಕ್ಕೂ ಹೆಚ್ಚು ಶಿಬಿರಾರ್ಥಿಗಳು 12 ಮಂಡಲ ಸೂರ್ಯ ನಮಸ್ಕಾರ ಮಾಡಿ ವಿಶೇಷ ಸಾಧನೆ ಮಾಡಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರಯ್ಯ, ಓಂಕಾರ್, ಡಾ.ನಾಗರಾಜ ಪರಿಸರ, ಜಿ.ವಿಜಯಕುಮಾರ್, ಜಗದೀಶ್, ಲವಕುಮಾರ, ಚಂದ್ರಶೇಖರಯ್ಯ, ಹರೀಶ್, ನೀಲಕಂಠ ರಾವ್ ಹಾಗೂ ಎಲ್ಲ ಶಾಖೆಯ ಯೋಗ ಶಿಕ್ಷಕರಗಳು ಭಾಗವಹಿಸಿದ್ದರು.