ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಹಕಾರ ಸಂಘಗಳನ್ನು ಉಳಿಸಲು ಪ್ರತಿಯೊಬ್ಬರು ಕೆಲಸ ಮಾಡಬೇಕು. ಸಂಘಗಳಿಂದ ಜನರ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಪೀಕಾರ್ಡ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ರೈತಸಂಘ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಹಕಾರ ಸಂಘಗಳ ಚುನಾವಣೆ ಅತ್ಯಂತ ಪ್ರಮುಖ, ನಮ್ಮ ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗೂಡಿ ಚುನವಣೆಯಲ್ಲಿ ಕಾಂಗ್ರೆಸ್ ಮತ್ತು ರೈತಸಂಘ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಸಹಕಾರ ಸಂಘಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಸಹಕಾರ ಸಂಘಗಳು ಉಳಿದರೆ ರೈತರಿಗೆ ಸಹಕಾರವಾಗಲಿದೆ. ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಡೆಗಟ್ಟಬೇಕಾದರೆ ಸಹಕಾರ ಸಂಘಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.ಫೆ.8ರಂದು ನಡೆಯಲಿರುವ ಪೀಕಾರ್ಡ್ ಬ್ಯಾಂಕ್ ಚುನಾವಣೆಗೆ ತಾಲೂಕಿನ ಎಲ್ಲಾ ಕ್ಷೇತ್ರಗಳಿಂದ ಮೈತ್ರಿ ಕೂಟದ ಅಭ್ಯರ್ಥಿಗಳು ಸ್ಪರ್ಧಿಸಿದ್ಧಾರೆ. ರೈತಸಂಘ ಮತ್ತು ಕಾಂಗ್ರೆಸ್ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮೈ ಮರೆಯದೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಪಡಬೇಕು. ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಎಲ್ಲವನ್ನು ಮರೆತು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು.
ಈ ವೇಳೆ ರೈತಸಂಘ ತಾಲೂಕು ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜು, ಮುಖಂಡರಾದ ಎಸ್.ದಯಾನಂದ್, ಸಿ.ಎನ್.ವಿಜೇಂದ್ರ, ಆಶಾ ಲವಕುಮಾರ್, ದಯಾನಂದ ಬಾಬು, ದೊಡ್ಡಿಘಟ್ಟ ಸುರೇಶ್, ದೇವರಾಜು ಇತರರು ಇದ್ದರು.ಬಾಗಲಕೋಟೆ ತೋಟಗಾರಿಕೆ ವಿವಿಗೆ ನಾಮನಿರ್ದೇಶನ
ಮಂಡ್ಯ:ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ನಾಮ ನಿರ್ದೇಶನ ಸದಸ್ಯರನ್ನಾಗಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಎಚ್.ಜೆ.ಮನೋಹರ್ ಅವರನ್ನು ನೇಮಕ ಮಾಡಲಾಗಿದೆ. ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಹೆತ್ತಗೋನ ಹಳ್ಳಿ ಗ್ರಾಮದವರಾದ ಇವರು ಪ್ರಸ್ತುತ ವೃತ್ತಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಡ್ಯದ ವಿವಿ ನಗರದಲ್ಲಿ ವಾಸವಿದ್ದು, ಸಮಾಜದ ಹಲವು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಮಾಜ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.