ಪು.2... ಸುಖ ನಿದ್ರೆ, ನೀರು ಉತ್ತಮ ಆರೋಗ್ಯಕ್ಕೆ ಸಹಕಾರಿ

| Published : Mar 30 2024, 12:50 AM IST

ಸಾರಾಂಶ

ಮಹಾಲಿಂಗಪುರ: ಇಂದಿನ ಜನರ ಆಹಾರ ಪದ್ಧತಿ ಸರಿ ಇಲ್ಲ. ಫಾಸ್ಟ್‌ಫುಡ್‌ಗಳತ್ತ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ. ನಾವು ಎಷ್ಟೇ ಪ್ರಗತಿ ಸಾಧಿಸಿದರೂ ಜೀವನದಲ್ಲಿ ಒಂದಿಷ್ಟು ವಿಶ್ರಾಂತಿ ಬೇಕು. ಅದಕ್ಕಾಗಿ ಉತ್ತಮ ಅರೋಗ್ಯ ಅತ್ಯವಶ್ಯಕ. ಸರಿಯಾದ ನಿದ್ರೆ, ಕ್ರಮಬದ್ಧ ಆಹಾರ ಪದ್ಧತಿ ನಮಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಧಾರವಾಡದ ಮನಗುಂಡಿ ಮಾಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇಂದಿನ ಜನರ ಆಹಾರ ಪದ್ಧತಿ ಸರಿ ಇಲ್ಲ. ಫಾಸ್ಟ್‌ಫುಡ್‌ಗಳತ್ತ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ. ನಾವು ಎಷ್ಟೇ ಪ್ರಗತಿ ಸಾಧಿಸಿದರೂ ಜೀವನದಲ್ಲಿ ಒಂದಿಷ್ಟು ವಿಶ್ರಾಂತಿ ಬೇಕು. ಅದಕ್ಕಾಗಿ ಉತ್ತಮ ಅರೋಗ್ಯ ಅತ್ಯವಶ್ಯಕ. ಸರಿಯಾದ ನಿದ್ರೆ, ಕ್ರಮಬದ್ಧ ಆಹಾರ ಪದ್ಧತಿ ನಮಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಧಾರವಾಡದ ಮನಗುಂಡಿ ಮಾಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.

ಸ್ಥಳೀಯ ಬ್ರಹ್ಮ ವಿದ್ಯಾಶ್ರಮ ಸಿದ್ದಾರೂಢ ಮಠದಲ್ಲಿ ಹುರಕಡ್ಲಿ ಫೌಂಡೇಶನ್‌ ವತಿಯಿಂದ ನಡೆಯುತ್ತಿರುವ ನಿಸರ್ಗ ಚಿಕಿತ್ಸಾ ಶಿಬಿರದ ಮೊದಲ ದಿನದ ಅರೋಗ್ಯ ಪ್ರವಚನ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಮನುಷ್ಯ ದಿನಕ್ಕೆ 6 ರಿಂದ 8 ಗಂಟೆ ನಿದ್ದೆ ಮಾಡಲೇಬೇಕು. ಪ್ರತಿ ದಿನ 3 ರಿಂದ 5 ಲೀ.ನೀರು ಕುಡಿಯಬೇಕು ಎಂದು ನುಡಿದರು.

ಇಂದು ಆಧುನಿಕ ಜೀವನ ಶೈಲಿಯಿಂದ ಮನುಷ್ಯ ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ಪರಿಣಾಮ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾಬೆ. ಇಂದಿನ ಆಹಾರಗಳು ಕಲುಷಿತವಾಗಿವೆ. ರಾಸಾಯನಿಕ, ಕೆಮಿಕಲ್ ಮಿಶ್ರಿತ ವಿಷ ಸಿಂಪಡಿಸಿ ಬೆಳೆ ಬೆಳೆಯಲಾಗುತ್ತಿದೆ. ಅಡುಗೆ ಮನೆ ಆರೋಗ್ಯದ ಕೀಲಿ ಕೈ ಇದ್ದಂತೆ. ಹಸಿ ತರಕಾರಿ ಮತ್ತು ಬೇಯಿಸಿದ ತರಕಾರಿ ಎರಡು ಸಮವಾಗಿ ಸೇವಿಸಬೇಕು. ಇದರಿಂದ ಯಾವುದೇ ರೋಗಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ನಿಯಮಿತ ವ್ಯಾಯಾಮ, ವಾಕಿಂಗ್ ಮಾಡುವುದು ರೂಢಿಸಿಕೊಳ್ಳುವುದರಿಂದ ಆರೋಗ್ಯಯುತ ಬದುಕು ನಮ್ಮದಾಗುತ್ತದೆ ಎಂದರು.

ಬ್ರಹ್ಮ ವಿದ್ಯಾಶ್ರಮದ ಸಹಜಯೋಗಿ ಶ್ರೀ ಸಹಜಾನಂದ ಸ್ವಾಮಿಗಳು ಮಾತನಾಡಿ, ಚನ್ನಬಸು ಹುರಕಡ್ಲಿ ಅವರ ಸೇವೆ ಅನ್ಯನವಾದುದು. ಅವರು ತಮ್ಮ ತಂದೆ - ತಾಯಿ ಹೆಸರಿನಲ್ಲಿ ಪ್ರತಿ ವರ್ಷ ಈ ಅರೋಗ್ಯ ಶಿಬಿರ ನಡೆಸುತ್ತಿರುವುದು ಶ್ಲಾಘನಿಯವಾದುದು. ಅವರು ಮಾಡುವ ಸೇವೆ ಬೆಲೆ ಕಟ್ಟಲಾಗದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಶರಣರಾದ ಮಲ್ಲಪ್ಪಾ ಕಟಗಿ, ಇಂದಿನ ವೇಗದ ಜಗತ್ತಿನಲ್ಲಿ ಮನುಷ್ಯ ದುಡ್ಡಿನ ಬೆನ್ನತ್ತಿ, ಅರೋಗ್ಯ ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಇದರಿಂದ ಅರೋಗ್ಯ ಹದಗೆಟ್ಟು ಗಳಿಕೆ ದವಾಖಾನೆ ಪಾಲು ಆಗುತ್ತಿದೆ. ಇಂದು ಕಾರ್ಡಿಯಾ ಅಟ್ಯಾಕ್‌ ಹೆಚ್ಚುತ್ತಿದೆ. ಅರೋಗ್ಯ ಪೂರ್ಣ ಜೀವನಕ್ಕೆ ನಿತ್ಯ ಒಂದು ಗಂಟೆ ಮೀಸಲಿಡಬೇಕು. ಮುಂಜಾನೆ ಒಂದು ಗಂಟೆವರೆಗೆ ವಾಕಿಂಗ್, ಯೋಗ ಮಾಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವು ನಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಈ ವೇಳೆ ಸಿದ್ದಾನಂದ ಭಾರತಿ, ಯೋಗ ಗುರು ಮಹಾಂತೇಶ ವೇದಿಕೆ ಮೇಲೆ ಉಪಸ್ಥಿತರಿದ್ದರು. ಫೌಂಡೇಶನ್‌ ಅಧ್ಯಕ್ಷ ಚನ್ನಬಸು ಹುರಕಡ್ಲಿ, ಶಿವನಗೌಡ ಪಾಟೀಲ, ಶಿವಾನಂದ ಹುನಶ್ಯಾಳ, ಸಿದ್ದು ಶಿರೋಳ, ಸಿದ್ದು ದಡುತಿ, ವಿಜಯ ಸಬಕಾಳೆ, ವೀರೇಶ ಆಸಂಗಿ, ಮಹಾಂತೇಶ ಘಟ್ನಟ್ಟಿ, ಮಹೇಶ ಇಟಕನ್ನವರ, ,ಪುರಸಭೆ ಸದಸ್ಯೆ ಸವಿತಾ ಚನ್ನಬಸು ಹುರಕಡ್ಲಿ ಸೇರಿದಂತೆ ಹಲವರು ಇದ್ದರು. ಕಾರ್ಯಕ್ರಮ ಮಹಾಂತೇಶ ಪನಸ್ಲಕರ ನಿರೂಪಿಸಿ ವಂದಿಸಿದರು. ಶಿವಾನಂದ ಬಿದರಿ ಪ್ರಾರ್ಥನೆ ಹಾಡಿದರು.