ಸರ್ಕಾರ ಕೊಟ್ಟಿದ್ದ ದಂಡ ರಿಯಾಯ್ತಿ:3 ವಾರಗಳಲ್ಲಿ ₹96 ಕೋಟಿ ಸಂಗ್ರಹ

| Published : Sep 13 2025, 02:04 AM IST

ಸರ್ಕಾರ ಕೊಟ್ಟಿದ್ದ ದಂಡ ರಿಯಾಯ್ತಿ:3 ವಾರಗಳಲ್ಲಿ ₹96 ಕೋಟಿ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಡೆಯ ದಿನ ದಂಡ ಪಾವತಿಗೆ ಜಮಾಯಿಸಿರುವ ವಾಹನ ಮಾಲಿಕರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಪಾವತಿಸಲು ರಾಜ್ಯ ಸರ್ಕಾರ ಕೊಟ್ಟಿದ್ದ ಶೇ.50 ರಷ್ಟು ರಿಯಾಯತಿ ಕೊಡುಗೆ ಶುಕ್ರವಾರ ಕೊನೆಗೊಂಡಿದ್ದು, ಮೂರು ವಾರಗಳಲ್ಲಿ ಸುಮಾರು ₹96 ಕೋಟಿ ದಂಡ ಸಂಗ್ರಹವಾಗಿದೆ.

ಕೊನೆ ದಿನ ಜನರಿಂದ ಸಾಧಾರಣಾ ಸ್ಪಂದನೆ ಸಿಕ್ಕಿದ್ದು, ನಗರದಲ್ಲಿ ಶುಕ್ರವಾರ ರಾತ್ರಿ 7 ಗಂಟೆವರೆಗಿನ ಮಾಹಿತಿ ಪ್ರಕಾರ ₹12.5 ಕೋಟಿ ದಂಡ ಸಂಗ್ರಹವಾಗಿ 4.5 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನು ರಾತ್ರಿ 12 ಗಂಟೆವರೆಗೆ ದಂಡ ಪಾವತಿಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು, ದಂಡ ಮೊತ್ತ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ-ಚಲನ್ ಮೂಲಕ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಆ.23 ರಿಂದ ಸೆ.12 ವರೆಗೆ ಶೇ.50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿತ್ತು. ಅಂತೆಯೇ ಎಲ್ಲ ಸಂಚಾರ ಪೊಲೀಸ್ ಠಾಣೆಗಳು, ನಗರ ಸಂಚಾರ ನಿರ್ವಹಣಾ ಕೇಂದ್ರ ಹಾಗೂ ರಾಜ್ಯ ಪೊಲೀಸ್ ಆ್ಯಪ್ ಮತ್ತು ವೆಬ್ ಸೈಟ್ ಮೂಲಕ ದಂಡ ಪಾವತಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಈ ಅವಕಾಶ ಬಳಸಿಕೊಂಡು ದಂಡ ಪಾವತಿಸಿ ಪ್ರಕರಣಗಳನ್ನು ಜನರು ಮುಕ್ತಾಯಗೊಳಿಸಿದ್ದಾರೆ. ಕೊನೆ ದಿನ ಹಲವೆಡೆ ವಾಹನ ಸವಾರರು ಮುಗಿಬಿದ್ದು ದಂಡ ಪಾವತಿಸಿದ ಪ್ರಸಂಗವೂ ನಡೆದವು.

ಮೊದಲ ದಿನವೇ ಬೆಂಗಳೂರಿನಲ್ಲಿ ₹5 ಕೋಟಿ ದಂಡ ಸಂಗ್ರಹವಾಗಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಕೊನೆಗೆ ₹96 ಕೋಟಿ ರು ದಂಡ ಸಂಗ್ರಹವಾಗಿದ್ದು, ಸುಮಾರು 33 ಲಕ್ಷ ಪ್ರಕರಣಗಳು ವಿಲೇವಾರಿಗೊಂಡಿವೆ. ಈ ದಂಡ ಮೊತ್ತ ಹಾಗೂ ಪ್ರಕರಣಗಳ ಬಗ್ಗೆ ಶನಿವಾರ ಅಧಿಕೃತ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊನೆ ದಿನ ಸರ್ವರ್ ಕಿರಿಕಿರಿ

ಸಂಚಾರ ದಂಡ ಪಾವತಿಗೆ ಅಂತಿಮ ದಿನ ಸರ್ವರ್‌ನಲ್ಲಿ ಕೆಲ ಹೊತ್ತು ತಾಂತ್ರಿಕ ದೋಷ ಕಾಣಿಸಿಕೊಂಡು ಜನರು ಪರದಾಡುವಂತಾಯಿತು. ಒಮ್ಮೆಗೆ ದಂಡ ಪಾವತಿಗೆ ಸಾವಿರಾರು ಜನರು ಮುಗ್ಗಿದ ಪರಿಣಾಮ ಸರ್ವರ್‌ ಜಾಮ್ ಆಗಿತ್ತು. ಕೊನೆಗೆ ಈ ತಾಂತ್ರಿಕ ಆಡಚಣೆಯನ್ನು ಪೊಲೀಸರು ಬಗೆಹರಿಸಿದ ಬಳಿಕ ದಂಡ ಪಾವತಿ ಪ್ರಕ್ರಿಯೆ ಮುಂದುವರೆಯಿತು.

ಕಡಿಮೆ ದಂಡ ಸಂಗ್ರಹ

ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 3 ಕೋಟಿಗೂ ಅಧಿಕ ಪ್ರಕರಣಗಳಲ್ಲಿ ₹1,200 ಕೋಟಿ ದಂಡ ಬಾಕಿ ಇತ್ತು. ಆದರೆ ಶೇ.50 ರಷ್ಟು ಆಫರ್ ನಿರೀಕ್ಷಿತ ಮಟ್ಟದಲ್ಲಿ ಜನರ ಮೇಲೆ ಪರಿಣಾಮ ಬೀರಿಲ್ಲ. ಮೂರು ವಾರಗಳಲ್ಲಿ ನಗರದ ದಂಡ ಸಂಗ್ರಹ ಮೊತ್ತವು ₹100 ಕೋಟಿ ಮುಟ್ಟಬಹುದು ಎಂದು ಮೂಲಗಳು ಹೇಳಿವೆ.