ಇತ್ತೀಚೆಗೆ ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ನಿವೃತ್ತ ಎಸಿಪಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಮೂವರು ಕಿಡಿಗೇಡಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ನಿವೃತ್ತ ಎಸಿಪಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಮೂವರು ಕಿಡಿಗೇಡಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿಗಳಾದ ಸೈಯದ್‌ ಮೊಹ್ಸಿನ್‌, ಮೊಹಮ್ಮದ್ ಸಲ್ಮಾನ್ ಹಾಗೂ ಸೈಯದ್ ಇರ್ಫಾನ್ ಬಂಧಿತರಾಗಿದ್ದು, ಆರೋಪಿಗಳಿಂದ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ವಾಯು ವಿಹಾರ ಮುಗಿಸಿ ಮರಳುತ್ತಿದ್ದ ನಿವೃತ್ತ ಎಸಿಪಿ ಎಚ್‌.ಸುಬ್ಬಣ್ಣ ಮೇಲೆ ಹಲ್ಲೆ ನಡೆಸಿ 8 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಯಾಗಿ ಸುಬ್ಬಣ್ಣ ನಿವೃತ್ತರಾಗಿದ್ದು, ಸಂಜಯನಗರ ಸಮೀಪ ಅವರು ನೆಲೆಸಿದ್ದಾರೆ. ಪ್ರತಿ ದಿನ ಬೆಳಗ್ಗೆ ಹೆಬ್ಬಾಳ ಪಶು ವೈದ್ಯಕೀಯ ಮಹಾವಿದ್ಯಾಲಯದ ಆ‍ವರಣದಲ್ಲಿ ಸುಬ್ಬಣ್ಣ ವಾಯು ವಿಹಾರ ಮಾಡುತ್ತಿದ್ದರು. ಅಂತೆಯೇ ಇತ್ತೀಚೆಗೆ ವಾಯು ವಿಹಾರ ಮುಗಿಸಿ ಅವರು ಮನೆಗೆ ಮರಳುವಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.