ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತಹ ಮಕ್ಕಳು ಸಹ ಪ್ರತಿಭಾವಂತರು ಇರುವುದನ್ನು ಕಾಣುತ್ತೇವೆ. ಈಚೆಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಯಲು ಹೆಚ್ಚು ಅವಕಾಶ ನೀಡಿದ್ದರಿಂದಾಗಿ ಶೇ.೭೦ ರಷ್ಟು ವಿದ್ಯಾರ್ಥಿನಿಯರು ಹೆಚ್ಚು ಉತ್ತೀರ್ಣರಾಗುವದನ್ನು ಕಾಣುತ್ತೇವೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳದ ಸಭಾಂಗಣದಲ್ಲಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಹಮ್ಮಿಕೊಂಡಿದ್ದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಿಗುವ ಶೇ.೧೦೦ ರಷ್ಟು ಅನುದಾನದಲ್ಲಿ ಶೇ.೬೦ ರಷ್ಟು ಶಿಕ್ಷಕರ ವೇತನ, ಇತರೇ ಅಧಿಕಾರಿಗಳ ವೇತನಕ್ಕೆ ಹೋಗುತ್ತದೆ. ಉಳಿದ ಶೇ.೪೦ ರಷ್ಟು ಅನುದಾನದಲ್ಲಿ ಶಾಲೆಗಳ ಕಟ್ಟಡ ನಿರ್ಮಾಣ ಸೇರಿದಂತೆ ಶಾಲೆಗಳಿಗೆ ಎಲ್ಲ ಸೌಲಭ್ಯ ಒದಗಿಸಲು ಬಳಕೆ ಮಾಡಬೇಕಿದೆ ಎಂದರು.ಲಾಡ್ಲಿ ಫೌಂಡೇಶನ್ ಟ್ರಸ್ಟ್ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವುದು ಸೇರಿದಂತೆ ಸರ್ಕಾರಿ ಶಾಲೆಗೆ ಮಕ್ಕಳು ಹೆಚ್ಚು ಬರುವಂತಾಗುವ ಉದ್ದೇಶದಿಂದ ಶೈಕ್ಷಣಿಕ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ನಮ್ಮ ತಾಲೂಕಿಗೆ ಈ ಟ್ರಸ್ಟ್ ಹೆಚ್ಚು ಒತ್ತು ನೀಡಿದೆ. ಈ ಟ್ರಸ್ಟ್ ನಿರ್ಮಿಸುವ ಶೌಚಾಲಯವನ್ನು ಹುಡುಗಿಯರು ವಿಶೇಷವಾಗಿ ಸದುಪಯೋಗ ಪಡೆದುಕೊಳ್ಳಬೇಕು. ಶೌಚಾಲಯಗಳನ್ನು ವಿದ್ಯಾರ್ಥಿಗಳು, ಶಿಕ್ಷಕ ಬಾಂಧವರು ಸ್ಪಚ್ಛವಾಗಿಟ್ಟುಕೊಳ್ಳುವಂತಾಗಬೇಕು. ಸ್ವಚ್ಛತೆಯೇ ದೇವರು ಎಂಬುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ದೇವರನ್ನು ನಾವು ಸ್ವಚ್ಛ ಜಾಗದಲ್ಲಿಟ್ಟು ಜಾಗೃತ ಮಾಡಿ ಹಾರ ಹಾಕಿ ಪೂಜೆ ಸಲ್ಲಿಸಿದಾಗ ಮಾತ್ರ ನಾವು ಜಾಗೃತರಾಗಲು ಸಾಧ್ಯವಿದೆ ಎಂಬುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.ರಾಷ್ಟ್ರಪ್ರಶಸ್ತಿ ವಿಜೇತ ಡಾ.ಜಾವೀದ್ ಜಮಾದಾರ ಮಾತನಾಡಿ, ಲಾಡ್ಲಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ₹೧೩ ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯವನ್ನು ಸರ್ಕಾರಿ ಶಾಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಅತ್ಯಾಧುನಿಕ ಶೌಚಾಲಯಗಳನ್ನು ಬಳಕೆ ಮಾಡುವಾಗ ಸ್ವಚ್ಛತೆ ಕಾಪಾಡದೇ ಹೋದರೆ ನಮ್ಮ ಸಂಸ್ಥೆಗೆ ಮೇಸೇಜ್ ಬರುತ್ತದೆ. ಶೌಚಾಲಯಗಳು ಸದುಪಯೋಗವಾಗುವಂತೆ ಫೌಂಡೇಶನ್ ಸದಾ ನಿಗಾವಹಿಸುತ್ತದೆ. ಈ ಶೌಚಾಲಯ ವಿಶೇಷವಾಗಿ ಹುಡುಗಿಯರಿಗೆ ಸದುಪಯೋಗವಾಗುತ್ತದೆ. ಗುಜರಾತ, ರಾಜಸ್ತಾನ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಇಂತಹ ಶೌಚಾಲಯಗಳನ್ನು ಈ ಫೌಂಡೇಶನ್ ನಿರ್ಮಿಸಿದೆ. ಇದನ್ನು ಗಮನಿಸಿ ಉತ್ತರಪ್ರದೇಶ ರಾಜ್ಯ ಸರ್ಕಾರ ₹೫೦ ಕೋಟಿ ವೆಚ್ಚದ ಯೋಜನೆಯನ್ನು ಈ ಫೌಂಡೇಶನಗೆ ನೀಡಿದೆ ಎಂದರು.ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರಮೇಶ ಪೂಜಾರಿ ಮಾತನಾಡಿ, ೧೯೪೬ರಲ್ಲಿ ಆರಂಭವಾದ ಈ ಶಾಲೆಯ ಕಟ್ಟಡಗಳು ಬಹಳ ಶಿಥಿಲಾವಸ್ಥೆಯಲ್ಲಿದ್ದವು. ಇದೀಗ ₹೫೬ ಲಕ್ಷ ವೆಚ್ಚದಲ್ಲಿ ಸಚಿವ ಶಿವಾನಂದ ಪಾಟೀಲರು ಎಲ್ಲ ಕೋಣೆಗಳು ದುರಸ್ತಿ ಮಾಡುವ ಕಾಮಗಾರಿ ಹಮ್ಮಿಕೊಂಡಿದ್ದಾರೆ. ಈ ಕಾಲೇಜು ೪೨ ಕೋಣೆಗಳನ್ನು ಹೊಂದಿದೆ. ಬಹುತೇಕ ಎಲ್ಲ ಕಾರ್ಯಕ್ರಮಗಳು ಕಾಲೇಜಿನ ಆವರಣದಲ್ಲಿ ಜರುಗುವುದರಿಂದಾಗಿ ಸಭಾಮಂಟಪದ ಅಗತ್ಯವಿದೆ. ಸಚಿವರು ಇದನ್ನು ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು.ಲಾಡ್ಲಿ ಫೌಂಡೇಶನ್ ಟ್ರಸ್ಟ್ ರಾಯಭಾರಿ ಶಿಪಾ ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ನೀರು, ನೈರ್ಮಲ್ಯ ಮತ್ತು ಆರೋಗ್ಯ ಈ ಮೂರು ವಿಷಯಗಳು ನಮ್ಮನ್ನು ಪ್ರತಿದಿನ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ. ಶೌಚಾಲಯ ಬಳಕೆ ಮಾಡುವಂತಾಗಬೇಕು. ಅದನ್ನು ಬಳಸಿದ ನಂತರ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಕೈಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಕಳೆಯುವಂತಾಗಬೇಕು ಎಂದರು.ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಶೇಖರ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಇತರರು ಇದ್ದರು. ಸರಿತಾ ಚಕ್ರಸಾಲಿ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸಚಿವರು ವಿದ್ಯಾರ್ಥಿಗಳಿಗೆ ಲಾಡ್ಲಿ ಫೌಂಡೇಶನ್ ಟ್ರಸ್ಟ್‌ದ ಶೈಕ್ಷಣಿಕ ಕಿಟ್ ಬ್ಯಾಗ್ ವಿತರಿಸಿದರು.ಸರ್ಕಾರದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯಿದೆ. ಈ ಮೊದಲು ಖಾಸಗಿ ಶಾಲೆಗಳು ಶಿಕ್ಷಣವನ್ನು ಪರೋಪಕಾರದ ಕಾಯಕದ ರೀತಿಯಲ್ಲಿ ನೀಡುತ್ತಿದ್ದವು. ಇಂದು ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯಬಹುದು. ಆದರೆ, ಇಂದು ಖಾಸಗಿ ಶಾಲೆಗಳು ಲಾಭ ಮಾಡಿಕೊಳ್ಳಲು ಭರದಲ್ಲಿ ಶೋಷಣೆ ಆಗುತ್ತಿರುವುದು ವಿಷಾದಕರ ಸಂಗತಿ. ಅದೇ ಸರ್ಕಾರಿ ಶಾಲೆಗಳಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ. ಇಲ್ಲಿಯೂ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಶಾಲೆಗಳಲ್ಲಿಯೂ ಕಲಿಯುವ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುವುದನ್ನು ಕಾಣುತ್ತೇವೆ.
-ಶಿವಾನಂದ ಪಾಟೀಲ, ಸಚಿವರು.ಜಿಲ್ಲೆಯಲ್ಲಿ ೨೨ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ. ಈ ಶಾಲೆಯಲ್ಲಿಯೂ ಒಂದು ಶೌಚಾಲಯ ನಿರ್ಮಾಣವಾಗುತ್ತಿದೆ. ಇದು ಕೊನೆ ಹಂತದಲ್ಲಿದೆ. ಶೀಘ್ರವೇ ಇದು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಲಿದೆ. ಈ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮ್ಮ ಸಂಸ್ಥೆಯ ಒದಗಿಸಲು ಮುಂದಾಗಿದೆ. ಬಸವನಬಾಗೇವಾಡಿ, ಮನಗೂಳಿ, ಉಕ್ಕಲಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿರುವ ಶೌಚಾಲಯಗಳನ್ನು ರಿಪೇರಿ ಮಾಡಲಾಗುತ್ತದೆ. ಕೂಡಗಿ ಎನ್‌ಟಿಪಿಸಿಯ ಸಿಆರ್‌ಎಸ್ ಅನುದಾನ ಬೇರೆಡೆ ಹೋಗುತ್ತಿದೆ. ಈ ಅನುದಾನ ಮತಕ್ಷೇತ್ರ ಬಿಟ್ಟು ಬೇರೆಡೆ ಹೋಗದಂತೆ ಸಚಿವ ಶಿವಾನಂದ ಪಾಟೀಲರು ಗಮನಹರಿಸಬೇಕು.
-ಡಾ.ಜಾವೀದ್ ಜಮಾದಾರ, ರಾಷ್ಟ್ರಪ್ರಶಸ್ತಿ ವಿಜೇತರು.