ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಪು.ತಿ.ನ. ಕಲಾಮಂದಿರದಲ್ಲಿ ನಡೆದ ಶತಮಾನದ ಸರ್ಕಾರಿ ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ 100ನೇ ವರ್ಷದ ವಾರ್ಷಿಕೋತ್ಸವ, ಹಣತೆ- 10 ಸಮಾರಂಭದಲ್ಲಿ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ನಾಟಕ, ಸಮೂಹ ನೃತ್ಯ, ದೇಶಭಕ್ತಿಗೀತೆ, ಶಾಲಾಪರಿಚಯ, ಶಾಲಾವರದಿಯನ್ನು ಪ್ರಸ್ತುತ ಪಡಿಸುವ ಮೂಲಕ ಪೋಷಕರು ಮತ್ತು ನಾಗರಿಕರ ಎದುರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ದಶಾವತಾರ ನೃತ್ಯ, ಗಜಾನನಸ್ತುತಿ, ಯಕ್ಷಗಾನ ನೃತ್ಯ, ಮಕ್ಕಳಮನೆಯ ಪುಟಾಣಿಗಳ ವಿವಿಧ ವೇಷಭೂಷಣಗಳು, ಪ್ಯಾನ್ಸಿ ಡ್ರೆಸ್ ಅತ್ಯಾಕರ್ಷಕವಾಗಿ ಮೂಡಿಬಂದವು. ಕವಿ ಪು.ತಿ.ನ. ರಚಿಸಿದ ಗೋಕುಲ ನಿರ್ಗಮನದ ಮುಂದಿನ ಭಾಗ ಕವಿ ಎಚ್.ಎಸ್.ವಿ ರಚಿಸಿದ 7ನೇ ತರಗತಿ ಪಠ್ಯ ಬಿಲ್ಲಾಹಬ್ಬ, 5ನೇ ತರಗತಿ ಪರಿಸರದ ಪ್ರಾಣಿಗಳು ಹೇಳುವ ಕಥೆಯನ್ನು ಮಕ್ಕಳು ಅತ್ಯಂತ ಯಶಸ್ವಿಯಾಗಿ ರಂಗಪ್ರಸ್ತುತಿ ಮಾಡಿ ಮೆಚ್ಚುಗೆಗೆ ಪಾತ್ರವಾಗಿತ್ತು. ಖಾಸಗಿ ಶಾಲೆಗಳಿಗಿಂತ ಯಾವುದಕ್ಕೂ ಕಡಿಮೆಯಿಲ್ಲ ಎಂಬಂತೆ ಇಂಗ್ಲಿಷ್ ನಾಟಕ ಏಕಲವ್ಯ ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೆರೆದಿಟ್ಟರು.ಒಂದರಿಂದ 7ನೇ ತರಗತಿಯವರೆಗೇ ಬಾಲಕರ ಶಾಲೆಯಲ್ಲೇ ವ್ಯಾಸಂಗ ಮಾಡಿ ಹೆಚ್ಚು ಪ್ರಗತಿ ಸಾಧಿಸಿದ ಆಸಿಯಾ ಪರ್ವಿನ್, ಕೃತಿಕಾ, ರೂಪೇಶ್‌ಗೌಡಗೆ ಮುಖ್ಯಶಿಕ್ಷಕ ಸಂತಾನರಾಮನ್ ತಲಾ 20ಗ್ರಾಂ ಬೆಳ್ಳಿಯ ನಾಣ್ಯಗಳ ಬಹುಮಾನ ನೀಡಿದರೆ, ವಿದ್ವಾನ್ ಕುಮಾರ್ ಶಾಲೆಯ ಎಲ್ಲ ಮಕ್ಕಳಿಗೆ ಬಹುಮಾನ ಪ್ರಾಯೋಜಿಸಿದ್ದರು. ಶಾಲಾ ವಾರ್ಷಿಕೋತ್ಸವ ಯಶಸ್ಸಿಗೆ ಪು.ತಿ.ನ. ಟ್ರಸ್ಟ್ ಮತ್ತು ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದ್ದರು.
ಸಮಾರಂಭವನ್ನು ಬೆಂಗಳೂರಿನ ಖ್ಯಾತ ಶಿಕ್ಷಣಪ್ರೇಮಿ ವಕೀಲ ಅರವಿಂದ ರಾಘವನ್, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹೋದರ ರಾಘವ ಪ್ರಕಾಶ್ ಉದ್ಘಾಟಿಸಿದರು. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಸೌಜನ್ಯ ಸೇವಾಶ್ರಮದ ಶ್ರೀರಂಗರಾಜು, ಶಾಲೆ ಸಂಸ್ಕೃತ ಸಂಶೋಧನಾ ಸಂಸ್ಥೆ ಕುಲಸಚಿವ ಕುಮಾರ್ ಮುಖ್ಯಶಿಕ್ಷಕ ಸಂತಾನರಾಮನ್, ಎಸ್.ಡಿ.ಎಂ ಸಿ ಅಧ್ಯಕ್ಷ ಮಹೇಶ್, ಮಕ್ಕಳಮನೆ ಅಧ್ಯಕ್ಷ ಚಂದು ಭಾರದ್ವಾಜ್, ನಾಟಕ ತರಬೇತಿದಾರ ಗಿರೀಶ್, ಡ್ಯಾನ್ಸ್ ಮಾಸ್ಟರ್ ಚೇತನ್, ಗ್ರಾಪಂ ಸದಸ್ಯ ಜಯರಾಮೇಗೌಡ, ಸಾಹಿತಿ ಸಿಂಹ, ಶಾಲೆ ಶಿಕ್ಷಕಿಯರಾದ ಪೂರ್ಣಿಮ, ಗಿರಿಜಾ, ಮಹಾಲಕ್ಷ್ಮೀ, ಜಯಂತಿ, ಕವಿತ, ಹಿರಿಯ ವಿದ್ಯಾರ್ಥಿ ರವಿ ಮತ್ತಿತರರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲೆ ಹಿರಿಯ ವಿದ್ಯಾರ್ಥಿ, ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ,
ಶಿಕ್ಷಣಪ್ರೇಮಿ ಅರವಿಂದ ರಾಘವನ್ ಮಾತನಾಡಿದರು.ಬೆಂಗಳೂರಿನ ಸೌಜನ್ಯ ಸೇವಾಶ್ರಮದ ಶ್ರೀ ರಂಗರಾಜನ್, ಶಾಲಾ ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.