ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗುತ್ತಿದ್ದು, ಸಂಘ, ಸಂಸ್ದೆ, ಟ್ರಸ್ಟ್ ಗಳು ದಾನ ಮಾಡಿದರೆ ಸಾರ್ಥಕ ಆಗುತ್ತದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದರು.ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇಸರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವಿತರಿಸಿ ಮಾತನಾಡಿದರು.
ದಾನಿಗಳು ಇಂತಹ ಶಾಲೆಗಳಿಗೆ ದಾನ ಮಾಡಿದರೆ ಸಾರ್ಥಕತೆ ಆಗುತ್ತದೆ. ನಿಮ್ಮ ಶಾಲೆಗೆ ಒಂದರ ಮೇಲೊಂದರಂತೆ ಕೊಡುಗೆಗಳು ಹರಿದು ಬರುತ್ತಿದೆ. ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಲು ಕಂಪನಿಗಳು ಬರುತ್ತಿವೆ. ಇನ್ಪೋಸಿಸ್ ಸಂಸ್ಥೆಯು ಸುಮಾರು 6 ರಿಂದ 7 ಕೋಟಿ ರು.ವರೆಗೆ ಶಾಲಾ ಪರಿಕರಿಗಳನ್ನು ಪ್ರೌಢಶಾಲಾ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನೀಡಿದೆ. ಅದರ ಉಪಯೋಗವನ್ನು ಶಾಲಾ ಮಕ್ಕಳ ಪಡೆಯುತ್ತಿದ್ದಾರೆ ಎಂದರು.ಟಿವಿಎಸ್ ಕಂಪನಿ ಹಲವು ಅನೇಕ ಶಾಲೆಗಳಿಗೆ ಕೊಡುಗೆ ನೀಡುತ್ತಿದ್ದು, ಬದನಗುಪ್ಪೆ ಶಾಲೆ, ಕೊಳೀಪಾಳ್ಯ ಶಾಲೆಯನ್ನು ಚೆನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ದಾನಿಗಳು ಸಹಕಾರ ನೀಡುತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ತರಬೇಕು ಎಂಬ ಪೋಷಕರ ಕೂಗು ಇತ್ತು. ಇದರಿಂದ ಮಕ್ಕಳಿಗೆ ಅನುಕೂಲವಾಗುತದೆ ಇದನ್ನು ಒಪ್ಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ 56 ಸರ್ಕಾರಿ ಶಾಲೆಗಳು ಇಂಗ್ಲಿಷ್ ಶಾಲೆಗಳಾಗಿ ಪರಿವರ್ತನೆಯಾಗಿದ್ದು, ಆ ಶಾಲೆಯಲ್ಲಿ ಸೀಟು ಕೊಡುವುದಕ್ಕೆ ಆಗುತ್ತಿಲ್ಲ. ಇದನ್ನು ಮನಗಂಡ ಸರ್ಕಾರ ಆದೇಶ ಮಾಡಿದ್ದು. ಎಲ್‌ಕೆಜಿಗೆ 30 ಮಕ್ಕಳಿದ್ದನ್ನು ಶಾಲೆಗೆ 40 ಮಕ್ಕಳಿಗೆ, 1ನೇ ತರಗತಿಗೆ 40 ಮಕ್ಕಳಿದ್ದನ್ನು 50 ಮಕ್ಕಳಿಗೆ ತೆಗೆದುಕೊಳ್ಳಲು ಸರ್ಕಾರ ಘೋಷಣೆ ಮಾಡಿದೆ ಜನ ಏನನ್ನು ಬಯಸುತ್ತಾರೆ. ಅದಕ್ಕೆ ಅನುಗುಣವಾಗಿ ಸರ್ಕಾರ ತೀರ್ಮಾನಕೈಗೊಳ್ಳುತ್ತಿದೆ ಎಂದರು.
ಶಾಲೆಯನ್ನು ಡಾ. ಬಸವರಾಜೇಂದ್ರ ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ. ಅಲ್ಲದೆ ಈ ಶಾಲೆಯನ್ನು ಪ್ರೌಢಶಾಲೆ ಮಾಡಲು ಬಹಳ ಪ್ರಯತ್ನ. ಮಾಡುತ್ತಿದ್ದಾರೆ. ಇದಕ್ಕೆ ಇಲಾಖೆ ಸಹಕರಿಸುತ್ತದೆ. ಈ ಶಾಲೆಯು ಪ್ರೌಢಶಾಲೆಯಾಗಿ ಮುಂದಿನ ದಿನಗಳಲ್ಲಿ ಕಾಲೇಜು ಆಗಿ ಇಲ್ಲಿನ ಬಡಮಕ್ಕಳಿಗೆ ಶಿಕ್ಷಣ ಸಿಗುವಂತಾಗಲಿ ಎಂದು ಆಶಿಸಿದರು.ನೇಸರ ಟ್ರಸ್ಟ್ ಅಧ್ಯಕ್ಷ ಜಿ.ಸಿ.ವೀರರಾಜೇ ಅರಸ್ ಮಾತನಾಡಿ, 2016ರಲ್ಲಿ ಆರಂಭವಾದ ನೇಸರ ಚಾರಿಟಬಲ್ ಟ್ರಸ್ಟ್ ಅನ್ನು ಟ್ರಸ್ಟಿಗಳಾದ ಜಿ.ಸಿ.ವೀರರಾಜೇ ಅರಸ್, ನಿತಿನ್ ಎಚ್.ಎನ್, ಜಿ.ಎಸ್.ರಮೇಶ್, ಅನಿತಾ. ವಿ ನೆರವಿನಿಂದ ಸ್ಥಾಪಿಸಿತವಾಯಿತು. ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ 300 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತಟ್ಟೆ ಲೋಟಗಳನ್ನು ವಿತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಡಾ. ಶ್ವೇತ ಮಾತನಾಡಿದರು. ಸಿಆರ್‌ಪಿ ಎನ್.ಶಿವಕುಮಾರ್, ನೇಸರ ಟ್ರಸ್ಟ್ ಸದಸ್ಯರಾದ ಅನಿತಾ, ವಕೀಲ ನಿತಿನ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರ್, ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಬಸವರಾಜು, ಬಿಆರ್‌ಸಿ ರಾಜೀವ್, ಟ್ರಸ್ಟ್ ಸದಸ್ಯ ನಾಗೇಂದ್ರಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಮಹದೇವಸ್ವಾಮಿ, ಮುಖ್ಯಶಿಕ್ಷಕ ಮಾಲಿನಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.