ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಗುರುವಾರ ತಾವು ಭಾಷಣ ಮಾಡುವ ಮೊದಲು ಹಾಗೂ ನಂತರ ನಡೆದ ಎಲ್ಲಾ ಬೆಳವಣಿಗೆ, ಘಟನೆಗಳ ಕುರಿತು ಸವಿವರವಾದ ವರದಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದಾರೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.
- ಕೇಂದ್ರವನ್ನು ಟೀಕಿಸುವ ಅಂಶ ಕೈಬಿಡಲು ಒಪ್ಪಲಿಲ್ಲ
- ಕಾಂಗ್ರೆಸ್ ಶಾಸಕರು ನನ್ನ ಘೇರಾವ್‌ಗೆ ಯತ್ನಿಸಿದರು
---ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಗುರುವಾರ ತಾವು ಭಾಷಣ ಮಾಡುವ ಮೊದಲು ಹಾಗೂ ನಂತರ ನಡೆದ ಎಲ್ಲಾ ಬೆಳವಣಿಗೆ, ಘಟನೆಗಳ ಕುರಿತು ಸವಿವರವಾದ ವರದಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದಾರೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಜಂಟಿ ಅಧಿವೇಶನದಲ್ಲಿ ಭಾಷಣ ಮುಗಿಸಿದ ನಂತರ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತೋರಿದ ದುರ್ವರ್ತನೆ, ವಿಧಾನಸಭೆಯಿಂದ ತಮಗೆ ಘೇರಾವ್ ಹಾಕುವ ಪ್ರಯತ್ನ, ಇದರಿಂದ ತಮ್ಮ ಮೇಲೆ ಉಂಟಾದ ಒತ್ತಡಗಳ ಬಗ್ಗೆ ತಮ್ಮ ವರದಿಯಲ್ಲಿ ವಿವರವಾಗಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.ರಾಜ್ಯಪಾಲರು ತಮ್ಮ ವರದಿಯಲ್ಲಿ ಸರ್ಕಾರ ಸಿದ್ಧಪಡಿಸಿ ಕಳುಹಿಸಿದ ಭಾಷಣ, ಅದರಲ್ಲಿದ್ದ ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳ ಬದಲಾವಣೆಗೆ ತಾವು ನೀಡಿದ ಅಭಿಪ್ರಾಯ, ಭಾಷಣ ಬದಲಾವಣೆಗೆ ಒಪ್ಪದ ಸರ್ಕಾರದ ನಡೆ, ಈ ಹಿನ್ನೆಲೆಯಲ್ಲಿ ಭಾಷಣ ಓದಲು ತಾವು ಸಾಂವಿಧಾನಿಕವಾಗಿ ಕೈಗೊಂಡ ನಿರ್ಧಾರ, ಜಂಟಿ ಅಧೀವೇಶನದಲ್ಲಿ ತಾವು ಮಾಡಿದ ಭಾಷಣ, ಭಾಷಣ ಓದಿದ ಬಳಿಕ ಆಡಳಿತ ಪಕ್ಷದ ಸದಸ್ಯರ ವರ್ತನೆ, ನಂತರ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ನೀಡಿರುವ ಹೇಳಿಕೆಗಳು ಈ ಎಲ್ಲಾ ಮಾಹಿತಿಯನ್ನೂ ರಾಷ್ಟ್ರಪತಿ ಅವರಿಗೆ ರವಾಹಿಸಿದ್ದಾರೆ.
ವರದಿಯಲ್ಲಿ ಯಾವೆಲ್ಲಾ ಅಂಶಗಳಿವೆ?ಮೊದಲನೆಯದಾಗಿ ರಾಜ್ಯಪಾಲರು ಜ.22ರಂದು ನಿಗದಿಯಾಗಿದ್ದ ಜಂಟಿ ಅಧಿವೇಶನದಲ್ಲಿ ಓದಲು ರಾಜ್ಯ ಸರ್ಕಾರ ತಮಗೆ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಲ್ಲಿ ಯಾವೆಲ್ಲಾ ಅಂಶಗಳಿದ್ದವು? ಆ ಭಾಷಣದಲ್ಲಿ ಕೇಂದ್ರ ಸರ್ಕಾರ ವಿಕಾಸ್ ಭಾರತ್ ಜಿ ರಾಮ್ ಜಿ ಕಾಯ್ದೆ 2025 ಅನ್ನು ಜಾರಿಗೆ ತಂದಿರುವುದರ ವಿರುದ್ಧ ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ ಕಟು ಟೀಕೆಗಳೇನು? ಆ ಟೀಕೆಗಳನ್ನು ಜಂಟಿ ಅಧಿವೇಶನದಲ್ಲಿ ಓದುವುರಿಂದ ಪರಿಣಾಮವೇನಾಗುತ್ತದೆ ಎಂಬುದನ್ನು ಸಮಗ್ರವಾಗಿ ವಿವರಿಸುವ ಜೊತೆಗೆ ಆ ಟೀಕೆಗಳಿಗೆ ಸಂಬಂಧಿಸಿದ 2ರಿಂದ 11ನೇ ಪ್ಯಾರಾಗಳನ್ನು ಮಾರ್ಪಡಿಸಲು ಸಲಹೆ ನೀಡಲಾಗಿತ್ತು.
ಇದಾದ ಬಳಿಕ ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಆದರೆ, ತನ್ನ ಅಭಿಪ್ರಾಯವನ್ನು ಪರಿಗಣಿಸಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳಿಗೆ ಸಂಬಂಧಿಸಿದಂತೆ ಭಾಷಣವನ್ನು ಮಾರ್ಪಡಿಸಲು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕವಾಗಿ ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣವನ್ನು ಮೊದಲ ಪ್ಯಾರಾ ಮತ್ತು ಕೊನೆಯ ಪ್ಯಾರಾವನ್ನು ಓದಿ ಪೂರ್ಣ ಭಾಷಣವನ್ನು ಮಂಡಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.ಅಷ್ಟೇ ಅಲ್ಲದೆ, ತಾವು ಜಂಟಿ ಅಧಿವೇಶದಲ್ಲಿ ಭಾಷಣ ಓದಿ ಮುಗಿಸಿದ ತಕ್ಷಣ ನಡೆದ ಘಟನೆಗಳನ್ನೂ ಸವಿವರವಾಗಿ ತಮ್ಮ ವರದಿಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಅವರಿಗೆ ತಿಳಿಸಿದ್ದಾರೆ. ಭಾಷಣ ಮುಗಿಸಿದ ಕೂಡಲೇ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಹಾಗೂ ಘೇರಾವ್ ಪ್ರಯತ್ನದ ವಿವರವನ್ನು ನೀಡಿದ್ದಾರೆ ಎನ್ನಲಾಗಿದೆ.
ಇದರಿಂದ ಅನಿವಾರ್ಯವಾಗಿ ಅಧಿವೇಶನದಿಂದ ಹೊರನಡೆಯಬೇಕಾದ ಸನ್ನಿವೇಶ ಎದುರಾಯಿತು ಎಂದು ಮಾಹಿತಿ ರವಾನಿಸಿದ್ದಾರೆ. ಜೊತೆಗೆ ಜಂಟಿ ಅಧಿವೇಶನದ ಬಳಿಕ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ವಿವಿಧ ಸದಸ್ಯರು ಈ ಇಡೀ ಘಟನೆ ವಿಚಾರವಾಗಿ ನೀಡಿರುವ ಹೇಳಿಕೆಗಳ ಬಗ್ಗೆಯೂ ರಾಷ್ಟ್ರಪತಿ ಅವರಿಗೆ ವರದಿಯಲ್ಲಿ ಮಾಹಿತಿ ತಲುಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.