ಕನ್ನಡಪ್ರಭ ವಾರ್ತೆ ಸವದತ್ತಿ ವೀರಶೈವ ಮತ್ತು ಲಿಂಗಾಯತರೆಲ್ಲಾ ಒಂದೇ ಆಗಿದ್ದು, ನಮ್ಮಲ್ಲಿರುವಂತೆ ಭೇದ ಭಾವಗಳನ್ನು ಮರೆತು ನಾವು ಒಗ್ಗಟ್ಟಾಗಬೇಕಿದೆ ಎಂದು ಶ್ರೀಕ್ಷೇತ್ರ ಶ್ರೀಶೈಲ ಮತ್ತು ಯಡೂರ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ವೀರಶೈವ ಮತ್ತು ಲಿಂಗಾಯತರೆಲ್ಲಾ ಒಂದೇ ಆಗಿದ್ದು, ನಮ್ಮಲ್ಲಿರುವಂತೆ ಭೇದ ಭಾವಗಳನ್ನು ಮರೆತು ನಾವು ಒಗ್ಗಟ್ಟಾಗಬೇಕಿದೆ ಎಂದು ಶ್ರೀಕ್ಷೇತ್ರ ಶ್ರೀಶೈಲ ಮತ್ತು ಯಡೂರ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಯಡೂರದ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರಗಳ ಲೋಕಾರ್ಪಣೆ, ಮಹಾಕುಂಭಾಭಿಷೇಕ, ಲಕ್ಷ ದೀಪೋತ್ಸವ, ವೀರಭದ್ರ-ಭದ್ರಕಾಳಿಯರ ಮೂರ್ತಿ ತುಲಾಭಾರ ಮತ್ತು ಶ್ರೀಶೈಲ ಜಗದ್ಗುರುಗಳ ಜನ ಜಾಗೃತಿ ಧರ್ಮ ಸಮಾರಂಭಗಳ ನಿಮಿತ್ತವಾಗಿ ಹಮ್ಮಿಕೊಂಡ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವೃತ್ತಿಯಿಂದ ಬಂದ ಉಪಜಾತಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮೀಸಲಿಗೋಸ್ಕರ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರ ಸಹಕಾರವಿರಲಿ. ಆದರೆ ಸೌಲಭ್ಯತೆಗಳನ್ನು ಪಡೆಯುವ ನೆಪದಲ್ಲಿ ನಮ್ಮಲ್ಲಿ ನಾವೇ ಕಾಲೆಳೆಯುವ ಪ್ರಯತ್ನ ಮಾಡುವುದು ಬೇಡ. ಇಂದಿನ ಪರಸ್ಥಿತಿಯಲ್ಲಿ ಸಮಾಜಗಳೆಲ್ಲಾ ಒಂದಾಗಿ ಹೋಗುವಂತ ಮಾರ್ಗದರ್ಶನಗಳನ್ನು ನೀಡುವುದು ಅತ್ಯವಶ್ಯವಿದೆ ಎಂದ ಶ್ರೀಗಳು, ಮನುಷ್ಯರೆಲ್ಲಾ ಧರ್ಮದ ಹಾದಿಯಲ್ಲಿ ನಡೆದಲ್ಲಿ ಮಾತ್ರ ಅದಕ್ಕೆ ಅಂತಿಮ ಜಯ ಸಿಗಲು ಸಾಧ್ಯ. ಅಧರ್ಮದ ಹಾದಿ ಸಮಾಜಕ್ಕೆ ಮಾರಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿರುಪಾಕ್ಷ ಮಾಮನಿ ಮತ್ತು ಅಶ್ವತ ವೈದ್ಯ ಮಾತನಾಡಿ, ಜಗದ್ಗುರುಗಳ ಆಗಮನದಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಸುತ್ತಿವೆ. ಧರ್ಮವನ್ನು ಕೇವಲ ಆಚರಣೆಗಾಗಿ ಮಾಡದೆ ಬದುಕಿಗಾಗಿ ನಾವು ಧರ್ಮವನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆದುಕೊಂಡು ಹೋಗಬೇಕಿದೆ ಎಂದರು.

ಮುನವಳ್ಳಿ ಸೋಮಶೇಖರಮಠದ ಶ್ರೀ ಮುರಘೇಂದ್ರ ಮಹಾಸ್ವಾಮೀಜಿ ಹಾಗೂ ಮೂಲಿಮಠ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀ ಗೌರಿಶಂಕರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಪಟ್ಟಣದ ಗಣ್ಯಮಾನ್ಯರು ಶ್ರೀ ಕಲ್ಮಠಕ್ಕೆ ಆಗಮಿಸಿದ ಜಗದ್ಗುರುಗಳನ್ನು ಸ್ವಾಗತಿಸಿ ಸಾರೋಟದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಕುಂಭ ಮೇಳದೊಂದಿಗೆ ಪೂಜ್ಯರ ಮರೆವಣಿಗೆ ಮಾಡಿ ಮಾಮನಿ ಕಲ್ಯಾಣ ಮಂಟಪ ತಲುಪಿ ಅಲ್ಲಿ ಧರ್ಮ ಸಭೆಯನ್ನು ಮಾಡಲಾಯಿತು. ಧರ್ಮಸಭೆಯಲ್ಲಿ ದಾನಿಗಳಿಂದ ಶ್ರೀ ವೀರಭದ್ರೇಶ್ವರ ಮತ್ತ ಭದ್ರಕಾಳಿ ದೇವರ ಮೂರ್ತಿಗಳ ತುಲಾಭಾರವನ್ನು ನೆರವೇರಿಸಲಾಯಿತು.

ಈ ವೇಳೆ ಜಗದೀಶ ಶಿಂತ್ರಿ, ಅಲ್ಲಮಪ್ರಭು ಪ್ರಭುನವರ, ಬಸವರಾಜ ಪುರದಗುಡಿ, ಮದನಲಾಲ ಚೋಪ್ರಾ, ಬಿ.ಎನ್.ಪ್ರಭುನವರ, ಐ.ಪಿ.ಪಾಟೀಲ, ಸದಾಶಿವ ಕೌಜಲಗಿ, ಶಂಕರ ಶಾಮರಾಯನವರ, ಪ್ರವೀಣ ಪಟ್ಟಣಶೆಟ್ಟಿ, ಅಡಿವೆಪ್ಪ ಬೀಳಗಿ, ಜಗದೀಶ ಹಳೆಮನಿ, ಡಾ.ವೈ.ಎಮ್.ಯಾಕೊಳ್ಳಿ ಇತರರು ಉಪಸ್ಥಿತರಿದ್ದರು. ವಿಜಯ ಹಿರೇಮಠ ಸ್ವಾಗತಿಸಿದರು. ಎಂ.ಪಿ.ಪಾಟೀಲ ನಿರೂಪಿಸಿ ವಂದಿಸಿದರು.

--------