ಸಾರಾಂಶ
ಹಾವೇರಿ: ನಗರದ ಜಿಲ್ಲಾಸ್ಪತ್ರೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಭೇಟಿ ನೀಡಿ ಡೆಂಘೀ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದರು. ಬುಧವಾರ ಸಂಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ಡೆಂಘೀ ಜ್ವರದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದು, ಅದರಲ್ಲೂ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಖಾಸಗಿ, ಸರ್ಕಾರಿ ಹೀಗೆ ಯಾವ ಆಸ್ಪತ್ರೆಗೆ ಹೋದರೂ ಸಾಂಕ್ರಾಮಿಕ ಕಾಯಿಲೆ ಪೀಡಿತರೇ ಕಾಣುತ್ತಿದ್ದಾರೆ. ಅದರಲ್ಲೂ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುತ್ತಿರುವ ಡೆಂಘೀ ಜ್ವರ ಇನ್ನೂ ನಿಯಂತ್ರಣಕ್ಕೆ ಬಾರದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಡುಬಂದಿರುವ ಡೆಂಘೀ ಪ್ರಕರಣಗಳಲ್ಲಿ ೧ರಿಂದ ೧೬ ವರ್ಷದೊಳಗಿನ ಮಕ್ಕಳ ಸಂಖ್ಯೆ ಹೆಚ್ಚಿದೆ.
501 ಡೆಂಘೀ ಪ್ರಕರಣಗಳಲ್ಲಿ 1 ರಿಂದ 16 ವರ್ಷದೊಳಗಿನ 337 ಮಕ್ಕಳಿದ್ದಾರೆ. 16 ರಿಂದ ಮೇಲ್ಪಟ್ಟ164 ಕೇಸ್ ಕಂಡುಬಂದಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಸಲ ಡೆಂಘೀ ಪ್ರಕರಣದಲ್ಲಿ ಹತ್ತಾರು ಪಟ್ಟು ಹೆಚ್ಚಳ ಕಂಡಿದ್ದು, ಸಾಂಕ್ರಾಮಿಕ ಕಾಯಿಲೆ ತೀವ್ರ ಗತಿಯಲ್ಲಿ ಹಬ್ಬುತ್ತಿರುವುದು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಜಾಗೃತಿ ಚಟುವಟಿಕೆ ನಡೆಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಮಳೆ ನೀರು ನಿಲ್ಲದಂತೆ ಸ್ವಚ್ಛತೆ, ಸೊಳ್ಳೆ ಕಚ್ಚದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದರೂ ಡೆಂಘೀ ಪ್ರಕರಣಗಳು ನಿಯಂತ್ರಣಕ್ಕೆ ಬರದಿರುವುದು ಆತಂಕ ಮೂಡಿಸಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಡೆಂಘೀ ಜನರನ್ನು ಕಾಡುತ್ತಿದೆ. ಅದರಲ್ಲೂ ಹಾನಗಲ್ಲ ತಾಲೂಕಿನಲ್ಲೇ ಅಧಿಕವಾಗಿದ್ದು, 186 ಕೇಸ್ ಕಂಡುಬಂದಿದೆ. ಬ್ಯಾಡಗಿ ತಾಲೂಕಿನಲ್ಲಿ ೯೧, ಹಿರೇಕೆರೂರು ೮೧, ಹಾವೇರಿ 62 , ರಾಣಿಬೆನ್ನೂರು 23, ರಟ್ಟಿಹಳ್ಳಿ 24 , ಶಿಗ್ಗಾಂವಿ 27 ಹಾಗೂ ಸವಣೂರು ತಾಲೂಕಿನಲ್ಲಿ7 ಕೇಸ್ ಪತ್ತೆಯಾಗಿದೆ. ಈಗಾಗಲೇ 494 ಜನರು ಡೆಂಘೀಯಿಂದ ಗುಣಮುಖರಾಗಿದ್ದು, ೫ ಸಕ್ರಿಯ ಕೇಸ್‌ಗಳಿವೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇಬ್ಬರು, ಹಾವೇರಿ ಜಿಲ್ಲಾಸ್ಪತ್ರೆ, ಮಣಿಪಾಲ ಹಾಗೂ ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‌ಒ ಡಾ.ಜಯಾನಂದ ಮಾಹಿತಿ ನೀಡಿದ್ದಾರೆ.