ಕೋಚಿಮುಲ್ ಗೆ ಜೆಡಿಎಸ್- ಬಿಜೆಪಿ ಪಕ್ಷಗಳಿಂದ ವಾರದ ಗಡುವು

| Published : Jul 12 2024, 01:43 AM IST / Updated: Jul 12 2024, 10:37 AM IST

ಸಾರಾಂಶ

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ದಿಢೀರನೇ ಪ್ರತಿ ಲೀಟರ್ ಹಾಲಿನ ಮೇಲೆ 2 ರು.ದರ ಕಡಮೆ ಮಾಡಿದ್ದಾರೆ, ಈಗಾಗಲೇ ಮಳೆಯ ಕೊರತೆಯ ನಡುವೆ ಕೋಚಿಮುಲ್ ಆಡಳಿತ ಮಂಡಳಿ ರೈತರ ನೆರವಿಗೆ ಧಾವಿಸದೇ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ, 

 ಕೋಲಾರ :  ಕೋಚಿಮುಲ್ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಖರೀದಿ ದರವನ್ನು 2 ರುಪಾಯಿ ಇಳಿಕೆ ಮಾಡಿರುವ ಆದೇಶವನ್ನು ಒಂದು ವಾರದ ಒಳಗೆ ವಾಪಸ್ ಪಡೆಯುವಂತೆ ಕೋಚಿಮುಲ್ ಆಡಳಿತ ಮಂಡಳಿಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಗಡುವು ನೀಡಲಾಯಿತು.

ನಗರದ ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಕಚೇರಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ಮುಖಂಡರು, ಎರಡು ಪಕ್ಷಗಳ ಮುಖಂಡರಿಂದ ಶುಕ್ರವಾರ ಸಾಂಕೇತಿಕವಾಗಿ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ನೀಡಿ, ಒಂದು ವಾರದೊಳಗೆ ಆದೇಶವನ್ನು ವಾಪಸ್ ಪಡೆದು ಜಿಲ್ಲೆಯ ರೈತರ ರಕ್ಷಣೆಗೆ ಮುಂದಾಗಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯ ರೈತರು ಜೀವನಾಧಾರವಾಗಿ ಹೈನುಗಾರಿಕೆಯನ್ನು ನಂಬಿ ಬದುಕನ್ನು ಕಂಡುಕೊಂಡಿದ್ದಾರೆ, ಆದರೆ ಇವತ್ತು ಕೋಚಿಮುಲ್ ಆಡಳಿತ ಮಂಡಳಿಯ ತಪ್ಪು ನಿರ್ಧಾರಗಳಿಂದ ಜಿಲ್ಲೆಯ ಜನ ಹೈನುಗಾರಿಕೆಯಿಂದ ದೂರ ಉಳಿಯುವಂತ ವಾತಾವರಣ ಸೃಷ್ಟಿಯಾಗಿದೆ, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಪಕ್ಷಗಳು ಜನರ ಪರವಾಗಿ ನಿರಂತರವಾಗಿ ಹೋರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬಂದಿದ್ದಾರೆ. ಮುಂದೆಯೂ ಹೋರಾಟದಿಂದಲೇ ಕೋಚಿಮುಲ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಬೇಕಾಗಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎರಡೂ ಪಕ್ಷಗಳೂ ಒಗ್ಗಟ್ಟಿನಿಂದ ಹೋಗಲಿದ್ದೇವೆ, ರಾಜ್ಯದಲ್ಲಿ ಮೈತ್ರಿಕೂಟದ ಪಕ್ಷಗಳಿಂದ ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡಲಿದ್ದೇವೆ, ಆಡಳಿತ ಪಕ್ಷವು ಕಾಂಗ್ರೆಸ್ ಸರಕಾರದ ರೈತರು, ಕಾರ್ಮಿಕರ, ಬಡವರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಜನಕ್ಕೆ ಜಾಗೃತಿ ಮೂಡಿಸಲಾಗುತ್ತದೆ, ಕಾಂಗ್ರೆಸ್ ಪಕ್ಷದ ಸಹವಾಸ ಜನಕ್ಕೆ ಸಾಕಾಗಿದೆ, ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುವ ಕಾಲ ಹತ್ತಿರಕ್ಕೆ ಬರುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ದಿಢೀರನೇ ಪ್ರತಿ ಲೀಟರ್ ಹಾಲಿನ ಮೇಲೆ ೨ ರು.ದರ ಕಡಮೆ ಮಾಡಿದ್ದಾರೆ, ಈಗಾಗಲೇ ಮಳೆಯ ಕೊರತೆಯ ನಡುವೆ ಕೋಚಿಮುಲ್ ಆಡಳಿತ ಮಂಡಳಿ ರೈತರ ನೆರವಿಗೆ ಧಾವಿಸದೇ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ, ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಕನಿಷ್ಠ 40 ರು. ಖರ್ಚು ಆಗುತ್ತದೆ, ಆದರೆ ಇದೀಗ 2 ರು. ದರ ಕಡಿತಗೊಳಿಸಿದ್ದು, ರೈತರಿಗೆ ಪ್ರತಿ ಲೀಟರ್‌ಗೆ 31 ರು. ಸಿಗಲಿದೆ. ಬರಗಾಲದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಕಷ್ಟದಲ್ಲಿರುವಾಗ ಬೆಲೆ ಕಡಿತ ಎಷ್ಟು ಸರಿ ಎಂದು ಒಕ್ಕೂಟವನ್ನು ಪ್ರಶ್ನಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಮಾತನಾಡಿ, ಜಿಲ್ಲೆಯ ಹಾಲು ಉತ್ಪಾದಕರ ನೆರವಿಗೆ ಈ ಕೂಡಲೇ ಸರ್ಕಾರ ಮತ್ತು ಒಕ್ಕೂಟವು ಧಾವಿಸಬೇಕು, ಕೋವಿಡ್ ಸಂದರ್ಭದಲ್ಲಿ ಹೈನುಗಾರಿಕೆ ಹಾಗೂ ರೈತರಿಗೂ ತೊಂದರೆ ಆಗಿತ್ತು. ಕ್ರಮೇಣವಾಗಿ ಚೇತರಿಸಿಕೊಳ್ಳುವ ಹಂತದಲ್ಲಿ ಹಾಲು ಖರೀದಿ ದರ ಕಡಿಮೆ ಮಾಡಿದ್ದು, ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಮಾಡಿದ ಮೋಸವಾಗಿದೆ. ಕೂಡಲೇ ಆದೇಶವನ್ನು ವಾಪಸ್ ಪಡೆಯಬೇಕು, ಇಲ್ಲದೇ ಹೋದರೆ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಜಂಟಿಯಾಗಿ ಹೋರಾಟ ನಡೆಸಲಾಗುತ್ತದೆ ಎಂದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯಲವಾರ ಸೊಣ್ಣೇಗೌಡ, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಅರುಣಮ್ಮ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜಗೌಡ, ಮೈತ್ರಿ ಪಕ್ಷದ ಮುಖಂಡರಾದ ಸಾ.ಮಾ.ಬಾಬು, ನಾಮಾಲ್ ಮಂಜು, ತೋಟಗಳ ಅಶೋಕ್, ರೋಟರಿ ಸುಧಾಕರ್, ಮಂಜುನಾಥ್, ಎಬಿವಿಪಿ ಹರೀಶ್ ಇದ್ದರು.