ಸಾರಾಂಶ
ದಶಮಂಟಪಗಳ ಶೋಭಾಯಾತ್ರೆ ನಡೆಯುವ ಮೂಲಕ ದಸರಾ ಉತ್ಸವ ಸಂಪನ್ನಗೊಂಡಿತು. ಈ ಕ್ಷಣವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ಶನಿವಾರ ರಾತ್ರಿ ದಶಮಂಟಪಗಳ ಶೋಭಾಯಾತ್ರೆ ನಡೆಯುವ ಮೂಲಕ ದಸರಾ ಉತ್ಸವ ಸಂಪನ್ನಗೊಂಡಿತು.ಕಾವೇರಿ ದಸರಾ ಸಮಿತಿ 2024ರ 45ನೇ ವರ್ಷದ ಜನೋತ್ಸವದ ಕ್ಷಣವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಸ್ವಾತಂತ್ರ‍್ಯ ಹೋರಾಟಗಾರ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಸಂಜೆ 7.30ಕ್ಕೆ ಮಹಾಪೂಜೆ ಸಲ್ಲಿಸಿದ ನಂತರ ದೇವಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಶೋಭಯಾತ್ರೆಗೆ ಚಾಲನೆ ನೀಡಲಾಯಿತು.
ಶೋಭಾಯಾತ್ರೆಯಲ್ಲಿ ನಾಡಹಬ್ಬ ದಸರಾ ಸಮಿತಿ, ಕೈಕೇರಿ ಭಗವತಿ ಯುವ ದಸರಾ ಸಮಿತಿ, ಮಾರುಕಟ್ಟೆಯ ನವಚೇತನ ದಸರಾ ಸಮಿತಿ, ಮೂರನೇ ವಿಭಾಗದ ಯುವ ದಸರಾ ಸಮಿತಿ, ಎರಡನೇ ವಿಭಾಗದ ಸರ್ವರ ದಸರಾ ಸಮಿತಿ, ಅರುವತ್ತೊಕ್ಕಲುವಿನ ಶಾರದಾಂಭ ದಸರಾ ಸಮಿತಿ, ಕಾಫಿ ಬೋರ್ಡ್ನ ಕಾಡ್ಲಯ್ಯಪ್ಪ ಸಮಿತಿ, ಕೊಪ್ಪದ ಸ್ನೇಹಿತರ ಬಳಗ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಪಾಲ್ಗೊಂಡಿದ್ದವು.ಮಂಟಪಗಳೊಂದಿಗೆ ಅಪಾರ ಸಂಖ್ಯೆಯ ಯುವಕ, ಯುವತಿಯರು ಡಿಜೆ ಸೌಂಡ್, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಬಹುಮಾನ: ಶಿವ ತಾಂಡವ ಕಥಾ ರೂಪಕ ಹೊರತಂದ ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ ಪ್ರಥಮ ಸ್ಥಾನ ಪಡೆದಿದೆ.ಆಂಜನೆಯ ಕಥಾ ರೂಪಕ ಪ್ರಸ್ತುತ ಪಡಿಸಿದ್ದ ಮೂರನೇ ವಿಭಾಗದ ಯುವ ದಸರಾ ಸಮಿತಿ ದ್ವಿತೀಯ ಸ್ಥಾನ, ಸ್ನೇಹಿತರ ಬಳಗ ಕೊಪ್ಪ ತೃತೀಯ ಸ್ಥಾನ ಪಡೆಯಿತು.
ಬಹುಮಾನ ಘೋಷಣೆಯನ್ನುಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಕಾವೇರಿ ದಸರಾ ಸಮಿತಿ ಪ್ರದಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಉಪಾದ್ಯಕ್ಷ ಶಿವಾಜಿ, ಕೋಶಧಿಕಾರಿ ಚೆಪ್ಪುಡಿರ ದ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ ಮಂಜುಳಾ, ಸಂಸ್ಕ್ರತಿ ಸಮಿತಿ ಸಂಚಾಲಕರಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ಅವಿನಾಶ್, ಸಂಯೋಜಕರಾದ ಮನೆಯಪಂಡ ಶೀಲಾ ಬೋಪ್ಪಣ್ಣ, ಚಂದನ್ ಕಾಮತ್, ಸಮಿತಿ ಸದಸ್ಯರಾದ ಕೊಕ್ಕಂಡ ರೋಶನ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ., ಗುರುರಾಜ್, ಓಮನ, ಚಂದನ ಮಂಜುನಾಥ್ ನೇರವೇರಿಸಿದರು.ಮುಂಜಾನೆ 4 ಗಂಟೆಯ ಸುಮಾರಿಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಶೋಭಾಯಾತ್ರೆ ಪ್ರದರ್ಶನ ವೀಕ್ಷಿಸಲು ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಬೆಳಗ್ಗೆ ಆರು ಗಂಟೆಯಾದರೂ ಕೆಲವು ಮಂಟಪಗಳು ಬಸ್ ನಿಲ್ದಾಣ ಬಳಿ ಬರಲೇ ಇಲ್ಲ. ತೀರ್ಪುಗಾರರು ಕೆಲವು ಮಂಟಪಗಳ ಬಳಿ ತೆರಳಿ ಅಲ್ಲಿಯೇ ಪ್ರದರ್ಶನ ವೀಕ್ಷಣೆ ಮಾಡುವ ಮೂಲಕ ಅಂಕ ನೀಡಿದರು. ಇದರಿಂದಾಗಿ ಬಸ್ ನಿಲ್ದಾಣಕ್ಕೆ ನಿಗದಿತ ಸಮಯದಲ್ಲಿ ಬರ ಬೇಕಾಗಿದ್ದ ಮಂಟಪಗಳು ಬರಲು ಸಾಧ್ಯವಾಗದೆ ಅಲ್ಲಿ ಕಾಯುತ್ತಿದ್ದವರು ನಿರಾಸೆಗೊಂಡರು.