ಸಾರಾಂಶ
ಕಳೆದೊಂದು ವಾರದಿಂದ ಸುರಿದ ಭರ್ಜರಿ ಮಳೆಯಿಂದಾಗಿ ತಾಲೂಕಿನ ದೇವಸಮುದ್ರ ಕೆರೆ ಕೋಡಿ ಬಿದ್ದು, ನೂರಾರು ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದ್ದು, ನೂರಾರು ಮನೆಗಳು ಜಲಾವೃತಗೊಂಡು ಭಾರಿ ಅವಾಂತರ ಸೃಷ್ಟಿಯಾಗಿದೆ.
ಬಿಜಿಕೆರೆ ಬಸವರಾಜ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರುಕಳೆದೊಂದು ವಾರದಿಂದ ಸುರಿದ ಭರ್ಜರಿ ಮಳೆಯಿಂದಾಗಿ ತಾಲೂಕಿನ ದೇವಸಮುದ್ರ ಕೆರೆ ಕೋಡಿ ಬಿದ್ದು, ನೂರಾರು ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದ್ದು, ನೂರಾರು ಮನೆಗಳು ಜಲಾವೃತಗೊಂಡು ಭಾರಿ ಅವಾಂತರ ಸೃಷ್ಟಿಯಾಗಿದೆ.
ಸಂಡೂರು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಕ್ಕುರ್ತಿ ಕೆರೆ ಕೋಡಿ ಬಿದ್ದು, ದೇವಸಮುದ್ರ ಕೆರೆಯೂ ಕೋಡಿ ಬಿದ್ದಿದೆ. ಕೊಡಿ ಕಾಲುವೆ ಪಕ್ಕದ ಮನೆಗಳಿಗೆ ಹಾಗೂ ತಗ್ಗು ಪ್ರದೇಶಕ್ಕೂ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ಕೆರೆಯ ಹಿನ್ನೀರು ದೇವಸಮುದ್ರ ಹಾಗೂ ರಾಂಪುರ ಜಮೀನುಗಳನ್ನು ಮುಳುಗಡೆಯನ್ನಾಗಿಸಿದೆ. ಇದರಿಂದ ಬಡ ರೈತರ ಬದುಕಿಗೆ ಆಸರೆಯಾಗಿದ್ದ ಬೆಳೆ ಕೈ ಸೇರದೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕಳೆದೊಂದು ದಶಕದಿಂದ ದೇವಸಮುದ್ರ ಕೆರೆ ಎರಡು ಬಾರಿ ಕೋಡಿ ಬಿದ್ದಿದೆ. ನೈಸರ್ಗಿಕವಾಗಿದ್ದ ಕೋಡಿ ಕಾಲುವೆ ಬಂದ್ ಆಗಿರುವ ಪರಿಣಾಮವಾಗಿ ಕೋಡಿ ನೀರು ಊರ ಮಧ್ಯದಿಂದ ಹಾದು ಹೋಗುತ್ತದೆ. ಇದರಿಂದ ಕಾಲುವೆ ಪಕ್ಕದ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮುಖ್ಯ ರಸ್ತೆಯಲ್ಲಿ ಮೊಳಕಾಲುದ್ದ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.ಕೆರೆ ಸಮೀಪದ 20ಕ್ಕೂ ಹೆಚ್ಚು ಮನೆಗಳಲ್ಲಿ ಸದಾ ನೀರು ಬಸಿಯುತ್ತಿದೆ. ದವಸ ದಾನ್ಯಗಳನ್ನು ಜೋಪಾನ ಮಾಡುವಲ್ಲಿ ಕುಟುಂಬಸ್ಥರು ಹೈರಾಣಾಗುತ್ತಿದ್ದಾರೆ. ಬಸಿಯುವ ನೀರು ಒರೆಸಿ ಸ್ವಚ್ಛ ಮಾಡುವುದು ನಿತ್ಯದ ಕಾಯಕವಾಗಿದೆ. ಮನೆ ಒರಾಂಡ, ರಸ್ತೆ ಸೇರಿದಂತೆ ಕಾಲುವೆ ಪಕ್ಕದ ಸ್ಥಳಗಳು ಬಸಿಯುತ್ತಿರುವ ನೀರಿನಿಂದಾಗಿ ಕುಟುಂಬಸ್ಥರು ಹೈರಾಣಾಗಿದ್ದು, ಸದಾ ಜಿನುಗುವ ನೀರಲ್ಲಿಯೇ ಬದುಕುವಂತಾ ಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಕುಸಿಯುವ ಭೀತಿ ಆವರಿಸಿದೆ.ಕೆರೆ ಕೋಡಿಯಿಂದ ಬರುವ ನೀರು ಜನತಾ ಕಾಲೋನಿ, ದಲಿತ ಕಾಲೋನಿಯ ಮೂಲಕ ಕುಂಬಾರು ಓಣಿಯನ್ನು ಬಳಸಿಕೊಂಡು ಮುಖ್ಯ ರಸ್ತೆಯನ್ನು ದಾಟಿ ಚಿನ್ನಹಗರಿ ಸೇರುತ್ತಿದೆ. ಮುಖ್ಯ ರಸ್ತೆಯಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರು ಪರಿತಪಿಸುವಂತಾಗಿದೆ. ಕಾಲುವೆ ಸಮೀಪದ ಮನೆಗಳಿಗೆ ನೀರು ನುಗ್ಗದಂತೆ ಕೆಲವರು ಮರಳಿನ ಚೀಲಗಳನ್ನು ಅಡ್ಡಲಾಗಿ ಹಾಕಿಕೊಂಡಿದ್ದು, ಭಾರಿ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ನೂರಾರು ಹೆಕ್ಟೇರ್ ಆಹುತಿ ಪಡೆದ ಹಿನ್ನೀರು: 255 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ದೇವಸಮುದ್ರ ಕೆರೆ ಭರ್ತಿಯಾಗಿ 50ಕ್ಕೂ ಹೆಚ್ಚಿನ ಜಮೀನುಗಳಲ್ಲಿ ಹಿನ್ನೀರು ಆವರಿಸಿಕೊಂಡಿದೆ. ಕೃಷಿ ಜಮೀನುಗಳಲ್ಲಿ ಮೊಳಕಾಲುದ್ದದ ನೀರು ನಿಂತಿದೆ. ಪರಿಣಾಮವಾಗಿ ಹತ್ತಿ, ಶೇಂಗಾ, ಸಜ್ಜೆ, ಬಾಳೆ, ಟೊಮೊಟೊ, ಮೆಣಸಿನ ಕಾಯಿ ಸೇರಿದಂತೆ ನಾನಾ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಕಾಯಿಕಟ್ಟುವ ಮೊದಲೇ ಬೆಳೆ ಕಳೆದುಕೊಂಡ ರೈತರ ಬದುಕು ಅತಂತ್ರಕ್ಕೆ ಸಿಲುಕಿದೆ.ಪ್ರತಿ ಬಾರಿ ಕೆರೆ ತುಂಬಿದಾಗ ಆಗುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೆರೆ ಕೋಡಿ ನೀರಿಗೆ ಸೂಕ್ತ ರಾಜ ಕಾಲುವೆ ನಿರ್ಮಿಸಿ ಜನರ ಸಂಕಷ್ಟ ನಿವಾರಿಸಬೇಕು ಎಂದು ಗ್ರಾಪಂ ಸದಸ್ಯ ಎಸ್.ಆರ್.ಪರಮೇಶ್ವರಪ್ಪ ಒತ್ತಾಯಿಸಿದ್ದಾರೆ.
ದೇವಸಮುದ್ರ ಕೆರೆ ಕೋಡಿ ನೀರು ಸರಾಗವಾಗಿ ಹರಿಯದೆ ಕಾಲುವೆ ಪಕ್ಕದ ಮನೆಗಳಿಗೆ ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗುತ್ತದೆ. ಕೆಲ ಮನೆಗಳಲ್ಲಿ ನೀರು ಬಸಿಯುತ್ತಿದೆ. ಪ್ರತಿ ಬಾರಿ ಕೋಡಿ ಬಿದ್ದಾಗ 50ಕ್ಕೂ ಹೆಚ್ಚು ಮನೆಗಳು ಸಮಸ್ಯೆಗೆ ಒಳಗಾಗಲಿವೆ. ಸರ್ಕಾರ ಸೂಕ್ತ ರಾಜ ಕಾಲುವೆ ನಿರ್ಮಿಸಬೇಕು. ಹಿನ್ನೀರಿನಿಂದ ಮುಳುಗಡೆಯಾಗಿರುವ ಜಮೀನುಗಳ ರೈತರಿಗೆ ಪರಿಹಾರ ಒದಗಿಸಬೇಕು.ಲಕ್ಷ್ಮಿ ಚಂದ್ರಣ್ಣ. ಗ್ರಾಪಂ ಅಧ್ಯಕ್ಷೆ ದೇವಸಮುದ್ರ.