ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದಸರಾ ಹಬ್ಬ ಮುಗಿದು ಒಂದು ದಿನವಾದರೂ ನಗರದಲ್ಲಿ ಕಸ ಮಾತ್ರ ಕರಗಿಲ್ಲ. ಹಲವಾರು ರಸ್ತೆ, ಮಾರುಕಟ್ಟೆ, ಬಡಾವಣೆಗಳಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಬಿದ್ದಿದೆ. ಹಬ್ಬದ ಕಾರಣ ಪೌರ ಕಾರ್ಮಿಕರು ರಜೆ ಹಾಕಿರುವ ಕಾರಣ ತ್ಯಾಜ್ಯ ವಿಲೇವಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ.ಹಲವಾರು ಬಡಾವಣೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಮಾರಾಟವಾಗದೇ ಉಳಿದ ಬಾಳೆಕಂದು, ಮಾವಿನ ಎಲೆ, ಬೂದಗುಂಬಳ, ಹೂವು ರಾಶಿ ರಾಶಿಯಾಗಿ ಬಿದ್ದಿದೆ.ಹಬ್ಬ ಮುಗಿಯುತ್ತಿದ್ದಂತೆಯೇ ಮಾರುಕಟ್ಟೆಗಳಲ್ಲಿ ಕಸವನ್ನು ತೆರವು ಮಾಡುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದರು. ಮಾರುಕಟ್ಟೆಗಳಲ್ಲಿ ಮಾತ್ರ ಕಸ ತೆರವು ಮಾಡಲಾಗಿದೆ. ಇದನ್ನು ತೆರವು ಮಾಡಲು ಪೌರ ಕಾರ್ಮಿಕರು ಮುಂದಾಗಿಲ್ಲ.
ಹಬ್ಬದ ಹಿನ್ನೆಲೆಯಲ್ಲಿ ನಿಗದಿಗಿಂತ 2000 ಟನ್ ಕಸ ಹೆಚ್ಚುವರಿಯಾಗಿ ಉತ್ಪತ್ತಿಯಾಗಿದೆ. ಇದನ್ನು ಒಂದು ದಿನದೊಳಗೆ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಕೆಲವು ಪೌರ ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದು ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದರಿಂದ ರಸ್ತೆ ಬದಿ ಬಿದ್ದಿರುವ ಕಸ ಹಾಗೆಯೇ ಉಳಿದಿದೆ. ಮಳೆ ಬಂದರೆ ಕಸ ಕೊಳೆತು ದುರ್ನಾತ ಬರಲಿದೆಯಲ್ಲದೆ, ಸುಲಭವಾಗಿ ಇದನ್ನು ತೆರವು ಮಾಡುವುದು ಸಾಧ್ಯವಾಗದು ಎಂದು ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರೇ ಹೇಳುತ್ತಾರೆ.ಸೋಮವಾರ ಸಂಜೆಯೊಳಗೆ ತೆರವು: ನಗರದ ವಿವಿಧ ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾದ ಕಸವನ್ನು ತೆರವು ಮಾಡುವ ಕಾರ್ಯವಾಗಿದೆ. ಕೆಲವು ಬಡಾವಣೆಗಳು, ಪಾದಚಾರಿ ಮಾರ್ಗದಲ್ಲಿ ವ್ಯಾಪಾರವಾಗದೆ ಉಳಿದ ಬಾಳೆ ಕಂದು ಮತ್ತಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ವ್ಯಾಪಾರ ಮಾಡುವ ಸಂದರ್ಭದಲ್ಲೇ ಅವರಿಗೆ ಬಿಟ್ಟುಹೋಗಬಾರದು ಎಂದು ಸೂಚಿಸಲಾಗಿತ್ತು. ಆದರೂ ಅವರು ಬಿಟ್ಟುಹೋಗಿದ್ದಾರೆ. ಇದನ್ನು ತೆರವು ಮಾಡಲು ಸಮಯ ಬೇಕು. ಸೋಮವಾರ ಸಂಜೆ ವೇಳೆಗೆ ಎಲ್ಲ ಕಸವನ್ನು ತೆರವು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.